ಟ್ರ್ಯಾಕ್ಟರ್ ಫಲಾನುಭವಿಗಳಿಂದ ಲಂಚ ಸ್ವೀಕಾರ: ತಾಪಂ ಸದಸ್ಯರ ಆರೋಪ
ಕುಂದಗೋಳ: ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವ ಟ್ಯಾಕ್ಟರ್ ಫಲಾನುಭವಿಗಳಿಂದ ರು. 25 ಸಾವಿರ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲಂಚ ಪಡೆದಿದ್ದಾರೆಂದು ತಾಪಂ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ತಾಪಂ ಕಾರ್ಯಾಲಯದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ಆರೋಪ ಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯುತ್ತರ ನೀಡಿದ ತೋಟಗಾರಿಕೆ ಇಲಾಖೆ ಅಧಿಕಾರಿ, ಫಲಾನುಭವಿಗಳ ಆಯ್ಕೆಯನ್ನು ಶಾಸಕರ ಆದೇಶದಂತೆ ಮಾಡಲಾಗಿದೆ ಎಂದು ಉತ್ತರಿಸುತ್ತಿದ್ದಂತೆಯೇ ಆಕ್ರೋಶಗೊಂಡ ಸದಸ್ಯರು ನಮ್ಮ ಗಮನಕ್ಕೆ ತಾರದೇ ಅದು ಹೇಗೆ ಆಯ್ಕೆ ಮಾಡಿದ್ದೀರೆಂದು ಅಧಿಕಾರಿ ವಿರುದ್ಧ ಗುಡುಗಿದರು. 2009ರಿಂದ ಇಲ್ಲಿವರೆಗೆ ಜರುಗಿದ ಎಲ್ಲ ಕಾಮಗಾರಿಗಳನ್ನು ತನಿಖೆಗೆ ಆದೇಶಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಕೃಷಿ, ಸಮಾಜ ಕಲ್ಯಾಣ ಶಿಕ್ಷಣ ಇಲಾಖೆ, ಸಹಕಾರ, ವಸತಿ ನಿಲಯ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ವರದಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತೆ ಮಂಡನೆಯಾದವು. ತಾಲೂಕು ಪಂಚಾಯತಿ ಅಧ್ಯಕ್ಷೆ ಅಂಬಮ್ಮ ಪಾಟೀಲ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಶೇಖರ ಬಿಸೇರೊಟ್ಟಿ, ಇ.ಓ. ಹುದ್ದಾರ, ಸದಸ್ಯರಾದ ಹಜರೇಶಾಬ ಬಾವಿಕಟ್ಟಿ, ಹನಮಂತಪ್ಪ ಕಂಬಳಿ, ರಂಗಪ್ಪ ಚಳ್ಳಿ, ಸಿದ್ದರಾಜ ಪಾಟೀಲ, ಕಲಾವತಿ ಪಾಟೀಲ, ಸುನೀತಾ ನಲವಾಲ, ಯಲ್ಲವ್ವ ಮುಗಳಿ, ಪುಟ್ಟಮ್ಮ ಮಾದನೂರ, ಲಕ್ಷ್ಮವ್ವ ಹಂಚಿನಾಳ ಇದ್ದರು.