ನಾಳೆಯಿಂದ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 24
ಚಿತ್ರ ಸಂಗಮ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಇಲ್ಲಿನ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಮೇ 26ರಿಂದ 30ರವರೆಗೆ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿ ಅಧ್ಯಕ್ಷ ಕೆ.ವಿ. ಶಂಕರ, ಮೇ 26ರಂದು ಸಂಜೆ 4ಕ್ಕೆ ದೃಶ್ಯಕಲಾ ಇತಿಹಾಸಕಾರ ಕೆ.ವಿ. ಸುಬ್ರಹ್ಮಣ್ಯಂ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ಕಲಾವಿದರಾದ ಎಂ.ಬಿ. ಪಾಟೀಲ, ಎಂ.ಆರ್. ಬಾಳೀಕಾಯಿ ಹಾಗೂ ಖ್ಯಾತ ಛಾಯಾಚಿತ್ರಗಾರ ಶಶಿ ಸಾಲಿ, ಶಂಕರ ಹಲಗತ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿರುವ ಈ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ದೇಶದ 200ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಅದರಲ್ಲಿ 100 ಕಲಾವಿದರು ಈ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಇದರಲ್ಲಿ ಎರಡು ವಿಭಾಗಗಳಿದ್ದು, 43 ಹಿರಿಯ ರಾಷ್ಟ್ರೀಯ ಕಲಾವಿದರು ಹಾಗೂ 57 ಪದವಿ ಪಡೆಯುತ್ತಿರುವ ರಾಷ್ಟ್ರೀಯ ಕಲಾವಿದರು ಆಯ್ಕೆಯಾಗಿದ್ದಾರೆ. ಅಲ್ಲದೇ, ಉ-ಕದ ಕಲಾಸಾಧಾಕರ ಹೆಸರಿನಲ್ಲಿ ಹಿರಿಯರ ರಾಷ್ಟ್ರೀಯ ವಿಭಾಗದಲ್ಲಿ 11 ಪ್ರಶಸ್ತಿಗಳು ಹಾಗೂ ಪದವೀಧರರ ರಾಷ್ಟ್ರೀಯ ವಿಭಾಗದಲ್ಲಿ 8 ಪ್ರಶಸ್ತಿಗಳನ್ನು ನೀಡಲಾಗುತ್ತಿರುವುದು ವಿಶೇಷ ಎಂದರು.