ಸುದ್ದಿ ಸಂಕ್ಷೇಪ
ಇಂದು ಕೃತಿ ಬಿಡುಗಡೆ
ಧಾರವಾಡ: ಭಗವಾನ ಬುದ್ಧರ 2557ನೇ ಜಯಂತಿ ಆಚರಣೆ ಹಾಗೂ ಪಾಲಿ ತಿಪಿಠಕ ಅಂಶಗಳು ಎಂಬ ಕೃತಿ ಬಿಡುಗಡೆ ಕಾರ್ಯಕ್ರಮ ಮೇ 25ರ ಬೆಳಗ್ಗೆ 11ಕ್ಕೆ ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಯಯ ಸಭಾಭವನದಲ್ಲಿ ನಡೆಯಲಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬುದ್ಧಿಸ್ಟ ಪಾಲಿ ಶಿಕ್ಷಣ ಹಾಗೂ ಸಂಶೋಧನ ಟ್ರಸ್ಟ್ ಅಧ್ಯಕ್ಷ ರವಿಕುಮಾರ ಬೇವಿನಗಿಡದ, ಬುದ್ಧನ ಸಂದೇಶ ಯುವಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ ಅಂದು ಬೆಳಗ್ಗೆ 8.30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಕಾರ್ಯಕ್ರಮ ಉದ್ಘಾಟಿಸುವರು. ಎಸ್ಸಿ ಹಾಗೂ ಎಸ್ಟಿ ಆಯೋಗದ ಮಾಜಿ ಅಧ್ಯಕ್ಷ ನೆಹರು ಓಲೇಕಾರ ಭಾಗವಹಿಸಲಿದ್ದು, ಜಿಪಂ ಸಿಇಓ ಪಿ.ಎ. ಮೇಘಣ್ಣವರ ಕೃತಿ ಬಿಡುಗಡೆಗೊಳಿಸುವರು. ಸಮಾಜ ಕಲ್ಯಾಣಾಧಿಕಾರಿ ಅಶೋಕ ಚಲವಾದಿ ಭಾವಹಿಸಲಿದ್ದಾರೆ ಎಂದು ತಿಳಿಸಿದರು. ಕವಿತಾ ಹೆಬಸೂರ, ಪ್ರಭು ಹಂಚಿನಾಳ, ಲಕ್ಷಣ ಬಕ್ಕಾಯಿ ಇದ್ದರು.
ಕುಂದಗೋಳ ತಾಪಂ ಸದಸ್ಯೆಯರ ಪರವಾಗಿಅಧಿಕಾರ ಚಲಾಯಿಸಿದ ಪತಿ, ಪುತ್ರರು
ಕುಂದಗೋಳ: ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಗೆ ಬಹುತೇಕ ಮಹಿಳಾ ಚುನಾಯಿತ ಸದಸ್ಯರ ಪರವಾಗಿ ಅವರ ಪತಿಯಂದಿರರು ಹಾಗೂ ಮಕ್ಕಳು ಪಾಲ್ಗೊಂಡು ಅಚ್ಚರಿಗೊಳಿಸಿದರು. ಅಲ್ಲದೆ, ಅಧಿಕಾರಿಗಳನ್ನು ಪ್ರಶ್ನಿಸುವ ಮೂಲಕ ತಮಗಿಲ್ಲಿದ ಅಧಿಕಾರ ಚಲಾಯಿಸಿದರು. ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಬಹುತೇಕ ಮಹಿಳಾ ಸದಸ್ಯರಲ್ಲದೇ ಸ್ವತಃ ಅಧ್ಯಕ್ಷರ ಪುತ್ರನೂ ಸಭೆಯಲ್ಲಿ ವಿವಿಧ ಕಾಮಗಾರಿ ಹಾಗೂ ಹಲವಾರು ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಶ್ನಿಸಿದರಲ್ಲದೇ ಕ್ರಮಕ್ಕೆ ಆಗ್ರಹಿಸಿದರು. ಸಭೆಯ ನಿಯಮಾವಳಿ ಪ್ರಕಾರ ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮಾಧ್ಯಮದವರ ಹೊರತಾಗಿ ಬೇರಾರೂ ಸಭೆಯಲ್ಲಿ ಭಾಗವಹಿಸುವಂತಿಲ್ಲ. ಆದಾಗ್ಯೂ ಪ್ರತಿ ಸಭೆಯಲ್ಲಿ ಚುನಾಯಿತ ಮಹಿಳಾ ಸದಸ್ಯರ ಪರವಾಗಿ ಅವರ ಪುತ್ರರು, ಪತಿಯರು ಪಾಲ್ಗೊಳ್ಳುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾಧ್ಯಮ ತಾಪಂ ಕಾರ್ಯನಿರ್ವಾಹಣಾಧಿಕಾರಿ ಹುದ್ದಾರ್ ಅವರನ್ನು ಪ್ರಶ್ನಿಸಿದಾಗ, ಸಭೆಯಲ್ಲಿ ಜನಪ್ರತಿನಿಧಿಗಳು ಮಾತ್ರ ಭಾಗವಹಿಸಬೇಕೆಂಬ ನಿಯಮವಿದೆ. ಆದರೂ ಅದು ಕಾರಣಾಂತರಗಳಿಂದ ಅನುಷ್ಠಾನಗೊಳ್ಳುತ್ತಿಲ್ಲ. ಅಲ್ಲದೇ ಈ ನಿಯಮವನ್ನು ಬಹುತೇಕ ತಾಲೂಕುಗಳಲ್ಲಿ ಪಾಲಿಸಲೂ ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.