ದುರಾಸೆ ಪತನಕ್ಕೆ ಕಾರಣ: ರಾಘವೇಶ್ವರಶ್ರೀ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 26
ಧನ ದಾಹ ಎಷ್ಟೋ ಬಾರಿ ಮಾನವನನ್ನು ದಾನವನಾಗುವಂತೆ ಮಾಡುತ್ತದೆ. ಸಂಬಂಧ ಅಳಿಸಿ ಹಾಕುತ್ತದೆ. ಸಹೋದರತ್ವವನ್ನು ದೂರ ಮಾಡುತ್ತದೆ. ಇದು ಗೊತ್ತಿದ್ದೂ ನಾವು ಅಂತಹ ಹಣದ ಬೆನ್ನ್ನು ಹತ್ತಿ ಹೋಗುತ್ತೇವೆ. ಇಂತಹ ಸಲ್ಲದ ದುರಾಸೆಗಳೇ ನಮ್ಮ ಪತನಕ್ಕೆ ಕಾರಣವಾಗುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀಮದ್ರಾಘವೇಶ್ವರ ಶ್ರೀಗಳು ಹೇಳಿದರು.
ಇಲ್ಲಿನ ಗೋಕುಲ ಗಾರ್ಡನ್ನಲ್ಲಿ ಆಯೋಜಿಸಲಾಗಿರುವ ರಾಮಕಥಾ ಪ್ರವಚನದ ಮೂರನೇ ದಿನ ಅವರು ಪ್ರವಚನ ನೀಡಿದರು. ತನ್ನ್ನ ಪರಾಕ್ರಮದಿಂದ ಮೂರು ಲೋಕಗಳನ್ನು ಮಣಿಸಿದ ರಾವಣ ತನ್ನ್ನದಲ್ಲದ ಸ್ವತ್ತಿಗಾಗಿ ಹಂಬಲಿಸಿದ. ಸೀತೆಯನ್ನ್ನು ಅಪಹರಿಸಿ ರಾಮನಿಂದ ಹತನಾದ. ಮಹಾಭಾರತದಲ್ಲಿ ದುರ್ಯೋಧನ ಪಾಂಡವರ ಏಳಿಗೆ ಸಹಿಸದೆ ಅವರ ಸಂಪತ್ತಿನ ಮೇಲೆ ಕಣ್ಣು ಹಾಕಿದ, ಮುಂದೆ ನಡೆದ ಯುದ್ಧದಲ್ಲಿ ಸಮೂಲವಾಗಿ ನಾಶವಾದ. ಆದ್ದರಿಂದ ನಮ್ಮದಲ್ಲದ ಸ್ವತ್ತಿಗಾಗಿ ಹಂಬಲಿಸದೆ ಸಿಕ್ಕಿದ್ದರಲ್ಲಿಯೇ ತೃಪ್ತರಾದರೆ ಎಂದೂ ನಾವು ಬದುಕಿನಲ್ಲಿ ಸಂಕಟ ಅನುಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ರಾಮಾಯಣಕ್ಕೆ ಕಾರಣವಾದ ಜಯ-ವಿಜಯರ ಕಥೆ ಹೇಳಿದ ಅವರು, ಹರಿಯ ಅಂತರಂಗದ ಭಕ್ತರಾಗಿ ಪ್ರತಿದಿನವೂ ಪೂಜಾ ವೇಳೆಯಲ್ಲಿ ಪರಮಾತ್ಮನ ದರ್ಶನ ಪಡೆಯುತ್ತಿದ್ದ ಜಯ-ವಿಜಯರು ಸಂಪತ್ತಿನ ವಿಭಾಗದಲ್ಲಿ ಜಗಳ ಮಾಡಿಕೊಂಡರು. ಪರಸ್ಪರ ಆನೆ ಹಾಗೂ ಮೊಸಳೆಗಳಾಗುವ ಶಾಪ್ನ ಕೊಟ್ಟುಕೊಂಡರು. ನಂತರ ತಮ್ಮ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೂ ಕಾಲ ಮೀರಿಹೋಗಿತ್ತು ಎಂದು ಹೇಳಿದರು.
ರಾಮಕಥಾ ಕಲಾವಿದರಾದ ಶ್ರೀಪಾದ ಭಟ್, ಪ್ರೇಮಲತಾ ದಿವಾಕರ, ಸಾಕೇತ ಶರ್ಮಾ, ಟಿ.ವಿ. ಗಿರಿ, ಪೂಜಾ ಹಾಗೂ ಪ್ರಿಯಾಂಕ ಇವರ ಸುಮಧುರ ಗಾಯನ, ಗಣೇಶ ಮತ್ತು ಗಣೇಶ ಭಾಗವತರ ಕೊಳಲು ಮತ್ತು ತಬಲ, ಭರತ್ ಹೆಗಡೆಯವರ ಹಾರ್ಮೋನಿಯಂ ವಾದನಗಳು ಶ್ರೋತೃಗಳು ಮನರಂಜಿಸಿದವು.
ಗಣಪತಿ ನೀರ್ನಳ್ಳಿ ಇವರ ಆಶುಚಿತ್ರ, ಅಶೋಕ ಮತ್ತು ಸಾಗರ ಗೋಪಿಯವರ ಪ್ರತಿಮಾಶಿಲ್ಪ, ಚಿತ್ರಗಳು ಜನರನ್ನ್ನು ಆಕರ್ಷಿದವು. ಕೊನೆಯಲ್ಲಿ ವಿಷ್ಣುಭಟ್ ಮೂರೂರು, ಈಶ್ವರಭಟ್ ಕಟ್ಟೆ, ವಿನಾಯಕ ಭಟ್, ಗಣಪತಿ ಹೆಗಡೆ ಇವರಿಂದ 'ಕರಿಮಕರಿ' ಎಂಬ ರೂಪಕ ಪ್ರದರ್ಶಿತವಾಯಿತು.