ಸುದ್ದಿ ಸಂಕ್ಷೇಪ
ಯುವತಿ ಅಪಹರಣ
ಹುಬ್ಬಳ್ಳಿ: ನಗನಾಣ್ಯ ಹಾಗೂ ಚಿನ್ನಾಭರಣದೊಂದಿಗೆ 19 ವರ್ಷದ ಯುವತಿಯನ್ನು ಅಪಹರಿಸಿದ ಘಟನೆ ಹಳೆಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಬೆಂಗಳೂರು ಮೂಲದ ನೀತು ಸ್ಟೀವನ್ ಅಪಹರಣಕ್ಕೊಳಗಾದ ಯುವತಿ. ರಜೆ ನಿಮಿತ್ಯ ಹುಬ್ಬಳ್ಳಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ನೀತು, ಮೇ 24ರಂದು ಸಂಜೆ 6.45ರ ಸುಮಾರಿಗೆ ರು. 90 ಸಾವಿರ, 28 ಬಂಗಾರದ ಬಳೆ, ಒಂದು ಬಂಗಾರದ ನೆಕ್ಲೆಸ್ ಹಾಗೂ ಮಾಂಗಲ್ಯ ಸರದೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕಾರವಾರ ರಸ್ತೆಯ ಶ್ರೀನಗರದ ಬಳಿಯಿಂದ ಯುವತಿಯನ್ನು ಅಪಹರಿಸಲಾಗಿದೆ ಎಂದು ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆಕೆಯ ಸಂಬಂಧಿ ಮಧುಕರ ಶ್ರೀಮಂತಹಳ್ಳಿ ತಿಳಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ವಯೋವೃದ್ಧ ಕಾಣೆ
ಹುಬ್ಬಳ್ಳಿ: ಬಟ್ಟೆ ಅಂಗಡಿಗೆ ಹೋಗಿದ್ದ ವಯೋವೃದ್ಧರೊಬ್ಬರು ಕಾಣೆಯಾಗಿರುವ ಬಗ್ಗೆ ಹಳೆಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶೋಕ ನಾಗೇಂದ್ರ ಮೋಳೆ (66) ಎಂಬುವರೆ ಕಾಣೆಯಾದ ವಯೋವೃದ್ಧ. ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆ ಬಲ್ಲರಾಗಿರುವ ಅಶೋಕರ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ಹಳೆಹುಬ್ಬಳ್ಳಿ ಪೊಲೀಸ್ ಠಾಣೆ ದೂ. ಸಂ. 2233541 ಅಥವಾ ಸಿಟಿ ಕಂಟ್ರೋಲ್ ರೂಮ್ ನಂ. 100, 2233555ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಅವೈಜ್ಞಾನಿಕ ರಸ್ತೆ ತಡೆ: ಪಿಎಸೈಗೆ ಗಾಯ
ಧಾರವಾಡ: ಭಾನುವಾರ ಸಂಜೆ ಅವೈಜ್ಞಾನಿಕ ರಸ್ತೆ ತಡೆಯಿಂದಾಗಿ ವಿದ್ಯಾಗಿರಿ ಪೊಲೀಸ್ ಠಾಣೆ ಪಿಎಸೈ ಪರಶುರಾಮ ಪೂಜೇರ ಎಂಬುವರು ಬಿದ್ದು ನಗರದ ಎಸ್ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಂಕಿತ ಮೂವರು ಜನ ಕಳ್ಳರು ಒಂದೇ ಬೈಕ್ನಲ್ಲಿ ಹೋಗುವಾಗ ವಿದ್ಯಾಗಿರಿ ಪೊಲೀಸ್ ಪೇದೆ ರಾಜು ಜಾಧವ ಎಂಬುವರು ಅವರನ್ನು ತಡೆದಿದ್ದಾರೆ. ಆದರೆ, ಬೈಕ್ ನಿಲ್ಲಿಸದೇ ಚಲಾಯಿಸಿದಾಗ ಪಿಎಸೈ ಪೂಜೇರ ಅವರು ಅವರನ್ನು ಬೆನ್ನಟ್ಟಿ ಹೋಗಿದ್ದಾರೆ. ಇಲ್ಲಿನ ಬಾರಾಕೊಟ್ರಿ ಮೂಲಕ ಮಿಚಗಿನ ಕಾಂಪೌಂಡ್ ಬಳಿಯ ಗಣೇಶ ದೇವಸ್ಥಾನದ ಬಳಿ ಅವರನ್ನು ಬೆನ್ನಟ್ಟುವಾಗಿ ಯಾವುದೇ ಸೂಚನೆ ಇಲ್ಲದ ರಸ್ತೆ ತಡೆಯಲ್ಲಿ ಪೂಜೇರ ಅವರು ಜೋರಾಗಿ ಚಲಾಯಿಸಿದ್ದರಿಂದ ಗಟಾರಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಬಲಭುಜ ಹಾಗೂ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. ಅದೃಷ್ಟವಶಾತ್ ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ಪೆಟ್ಟಾಗಿಲ್ಲ ಎಂದು ತಿಳಿದು ಬಂದಿದೆ. ಧಾರವಾಡದ ಅಳ್ನಾವರ ರಸ್ತೆಯ ಸಾಧನಕೇರಿ ಬಳಿಯೂ ಇದೇ ರೀತಿಯ ಅವೈಜ್ಞಾನಿಕ ರಸ್ತೆ ತಡೆ ಹಾಕಿದಾಗ ಅನೇಕ ಬೈಕ್ ಸವಾರರು ಕತ್ತಲಿನಲ್ಲಿ ಬಿದ್ದು ಗಾಯಗೊಂಡಿದ್ದರು. ಸ್ಥಳೀಯರು ಈ ಕುರಿತು ತೀವ್ರ ಪ್ರತಿಭಟನೆ ನಡೆಸಿದಾಗ ಈ ರಸ್ತೆ ತಡೆಗಳಿಗೆ ಬಿಳಿ ಬಣ್ಣ ಬಳಿಯಲಾಗಿತ್ತು. ಬೇಸರದ ಸಂಗತಿ ಏನೆಂದರೆ, ನಗರದ ಹಲವು ರಸ್ತೆ ತಡೆಗಳಿಗೆ ಯಾವುದೇ ಸೂಚನೆ ಅಥವಾ ಬಣ್ಣ ಬಳಿಯದಿರುವುದಿಂದ ಅಪಘಾತಗಳಾಗಿರುವುದು ಸಾಮಾನ್ಯವಾಗಿದೆ.