ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ವೃದ್ಧ
ಧಾರವಾಡ: ಅರವತ್ತೈದು ವರ್ಷದ ವಯೋವೃದ್ಧ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಇಲ್ಲಿನ ಯಾಲಕ್ಕಿಶೆಟ್ಟರ್ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಧಾರವಾಡ ತಾಲೂಕು ಕಲ್ಲೂರು ಮೂಲದ ಯಲ್ಲಪ್ಪ ನಿಂಗಪ್ಪ ಶಿವಪ್ಪನವರ (65) ಎಂಬ ವೃದ್ಧನೇ ಸುಮಾ (ಹೆಸರು ಬದಲಿಸಲಾಗಿದೆ) ಎಂಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಈತನು ಯಾಲಕ್ಕಿಶೆಟ್ಟರ್ ಕಾಲೋನಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದನು. ಪಕ್ಕದಲ್ಲೇ ಇದ್ದ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ, ರಾತ್ರಿ ಸಮಯದಲ್ಲಿ ಮನೆಗೆ ಹೊಕ್ಕು ಈ ಕೃತ್ಯ ಎಸಗಿದ್ದಾನೆ. ಈ ಬಾಲಕಿಗೆ ತಂದೆ ಇಲ್ಲ, ತಾಯಿ ಮನೆಯಿಂದ ಹೊರಗೆ ಹೋದಾಗ ಇದೇ ಸಮಯ ಸಾಧಿಸಿದ ವೃದ್ಧ ಕಾಮುಕ ಅಪ್ರಾಪ್ತಳ ಮಾನಭಂಗ ಮಾಡಿದ್ದಾನೆ. ಅತ್ಯಾಚಾರ ಎಸಗಿ ಧಾರವಾಡದಿಂದ ಪರಾರಿಯಾಗಿದ್ದು, ಸುದ್ದಿ ತಿಳಿದ ಬಾಲಕಿಯ ಸಂಬಂಧಿಗಳು ಸೋಮವಾರ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ. ಪ್ರಕರಣದ ಬೆನ್ನು ಹತ್ತಿರುವ ವಿದ್ಯಾಗಿರಿ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಇತ್ತೀಚಿಗೆ ಧಾರವಾಡ ನಗರದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿವೆ. ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.