ನೀರಿಗೆ ತತ್ವಾರ, ಮುಂಗಾರಿಗೆ ಕಾತರ
ಕಲಘಟಗಿ (ಧಾರವಾಡ): ಪಕ್ಕಾ ಮಲೆನಾಡು ಪ್ರದೇಶ ಕಲಘಟಗಿ. ಆದರೂ ಸಹ ಪ್ರಸಕ್ತ ಬಾರಿ ತಾಲೂಕಿನ ಹೆಚ್ಚಾನುಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ಮುಂಗಾರು ಸಮೀಪಿಸುತ್ತಿದ್ದಂತೆ ತಾಲೂಕಿನ ಸೂಳಿಕಟ್ಟಿ, ಬಮ್ಮಿಗಟ್ಟಿ, ಹುಲಕೊಪ್ಪ, ದೇವಿಕೊಪ್ಪ, ತಂಬೂರ, ಸಂಗಮೇಶ್ವರ, ಮಿಶ್ರಿಕೋಟಿ ಸೇರಿದಂತೆ ಮುಂತಾದ ಗ್ರಾಪಂ ವ್ಯಾಪ್ತಿಯ 28ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಕಾರಣವಿದು: ಹದಗೆಟ್ಟ ಕೊಳವೆ ಬಾವಿಗಳ ದುರಸ್ತಿ ಮಾಡದಿರುವುದು, ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಯಿಸಿರುವುದರಿಂದ ಅಂತರ್ಜಲ ಕುಸಿತ, ಹೆಸ್ಕಾಂನಿಂದ ಅಸಮರ್ಪಕ ವಿದ್ಯುತ್ ಪೂರೈಕೆ, ಇದ್ದ ನೀರನ್ನು ಪೂರೈಸಲು ಆಡಳಿತದ ವಿಳಂಬ ಧೋರಣೆಯೇ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮಳೆಗಾಲದಲ್ಲೂ ಹೆಚ್ಚಳವಾಗಲು ಕಾರಣ ಎನ್ನುತ್ತಾರೆ ತಜ್ಞರು. ಬರೀ ತಾಲೂಕು ಮಾತ್ರವಲ್ಲದೇ ಕಲಘಟಗಿ ಪಟ್ಟಣಕ್ಕೆ ನೀರುಣಿಸುತ್ತಿದ್ದ ಬೆಣಚಿ ಕೆರೆ ಈ ಬಾರಿ ಪೂರ್ತಿ ಬತ್ತಿದ್ದರಿಂದ ಪಟ್ಟಣದಲ್ಲಿ ಎರಡ್ಮೂರು ದಿನಗಳಿಗೆ ಬರುತ್ತಿದ್ದ ಕುಡಿಯುವ ನೀರು ಈಗ ಆರೇಳು ದಿನಕ್ಕೆ ವಿಸ್ತರಣೆಯಾಗಿದೆ. ಪಟ್ಟಣದಲ್ಲಿದ್ದ ಕೊಳವೆ ಬಾವಿಗಳಿಂದ ಸದ್ಯ ಕುಡಿಯುವ ನೀರು ಬಿಡುತ್ತಿದ್ದು, ಉತ್ತಮ ಮಳೆಯಾದರೆ ಮಾತ್ರ ಪಟ್ಟಣಕ್ಕೆ ನೀರಿನ ಭಾಗ್ಯ.
ಎಲ್ಲೆಲ್ಲಿ ಸಮಸ್ಯೆ: ತಾಲೂಕಿನ ಸೂಳಿಕಟ್ಟಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇತ್ತೀಚೆಗೆ ಆರೇಳು ಜನ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು ಹೊಸತೇನಲ್ಲ. ಹುಲಗಿನಕಟ್ಟಿ, ಸೋಮನಕೊಪ್ಪ, ಬಮ್ಮಿಗಟ್ಟಿ, ದೇವಿಕೊಪ್ಪ, ಗ್ರಾಮಗಳಲ್ಲಿನ ಹಲವಾರು ಜನರು ವಾಂತಿ ಭೇದಿಯಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್ ಪೈಪ್‌ಲೈನ್ ದುರಸ್ತಿ ಹಾಗೂ ಸ್ವಚ್ಛ ಮಾಡದಿರುವುದು ಇದಕ್ಕೆ ಕಾರಣವಾಗಿದ್ದು, ಈ ಕುರಿತು ಗ್ರಾಪಂನವರು ಸ್ವಚ್ಛತೆಯತ್ತ ಗಮನಹರಿಸಬೇಕಿರುವುದು ಅಗತ್ಯ.
ತಾಲೂಕಿನ ಮಿಶ್ರಿಕೋಟಿ ಗ್ರಾಮದ ಶಾಶ್ವತ ಕುಡಿಯುವ ನೀರಿನ ಯೋಜನೆ ಅಪೂರ್ಣಗೊಂಡಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರ್ಣಗೊಳಿಸಲು ಕ್ರಮಕೈಗೊಂಡಿರುವುದಾಗಿ ಜಿಪಂ, ಸದಸ್ಯ ವೈ.ಬಿ. ದಾಸನಕೊಪ್ಪ ಪತ್ರಿಕೆಗೆ ತಿಳಿಸುತ್ತಾರೆ. ತಾಲೂಕಿನ ಪರಸಾಪುರ, ಬು.ಹೂಲಿಕಟ್ಟಿಯಲ್ಲಿ ಕಲುಷಿತ ನೀರಿನ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಶುದ್ಧ ನೀರು ಪೂರೈಸಲು ಗಮನಹರಿಸಲಾಗಿದೆ ಎನ್ನುವುದು ಜಿಪಂ ಸದಸ್ಯ ಬಸವರಾಜ ಕರಡಿಕೊಪ್ಪ ಅವರ ವಾದ. ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆಗಾಗಿ, ಚರಂಡಿ ಸ್ವಚ್ಛತೆಗಾಗಿ ಗ್ರಾಪಂನಿಂದ ಅನುದಾನವಿದ್ದರೂ ಅದು ಸದ್ಭಳಕೆಯಾಗುತ್ತಿಲ್ಲ. ಇವೆಲ್ಲವೂ ಕೇವಲ ಕಡತದಲ್ಲಿ ಮಾತ್ರ ಕಂಡುಬರುತ್ತಿವೆ ಎಂಬುದು ಸಾರ್ವಜನಿಕರ ಆರೋಪ. ತಾಲೂಕಿನ ಗಂಬ್ಯಾಪೂರ ಗ್ರಾಪಂನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿಲ್ಲ. ಇದೇ ಸರದಿಯಲ್ಲಿ ದನಕರುಗಳಿಗೂ ಸಹ ಕೆರೆ ಹೊಂಡಗಳಲ್ಲಿಯೂ ನೀರಿಲ್ಲದೆ ಬಿರುಕು ಬಿಟ್ಟಿದ್ದು ಬಹಳ ಸಮಸ್ಯೆಯಾಗಿದೆ. ಕಲುಷಿತ ನೀರಿನಿಂದಾಗಿ ಹಿರೇಹೊನ್ನಳ್ಳಿ ಗ್ರಾಮದ ಕೆಲ ಮಕ್ಕಳು ಜ್ವರದ ಶಂಕೆಯಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮಾಹಿತಿ ನೀಡುವ ಗ್ರಾಮದ ಷಣ್ಮುಖಪ್ಪ ಬಡಿಗೇರ, ಶುದ್ಧ ಕುಡಿಯುವ ನೀರು ಪೂರೈಸುವತ್ತ ಗ್ರಾಪಂ ಮುಂದಾಗಬೇಕಿದೆ ಎನ್ನುತ್ತಾರೆ. ತಾಲೂಕಿನ 27 ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಕೊರತೆ ಇದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿಳಂಬವಾಗಿದೆ.
ಕಲಘಟಗಿ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾಗಿರುವ ಸಂತೋಷ ಲಾಡ್ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾರೆ. ಕ್ಷೇತ್ರದಲ್ಲಿ ತೀವ್ರ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದು, ಕೂಡಲೇ ಕ್ಷೇತ್ರಕ್ಕೆ ಆಗಮಿಸಿ ಈ ಕುರಿತು ಗಮನ ಹರಿಸುವ ಅಗತ್ಯವಿದೆ.
ಅಂತರ್ಜಲ ಮಟ್ಟ ಕುಸಿತ, ಬತ್ತಿದ ಬಾವಿಗಳು
ಧಾರವಾಡ-ಪ್ರತಿ ವರ್ಷ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಧಾರವಾಡ ತಾಲೂಕಿನಲ್ಲಿ ಅಷ್ಟೇನೂ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಕುಡಿಯುವ ನೀರಿನ ಕೊರತೆಯನ್ನು ಕೊಳವೆ ಬಾವಿಗಳು ನೀಗಿಸುತ್ತಿದ್ದವು. ಆದರೆ, ಈ ವರ್ಷ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಕೊಳವೆ ಬಾವಿಗಳು ಸಹ ಬತ್ತಿ ಹೋಗಿವೆ. ಈ ಕಾರಣದಿಂದ ತಾಲೂಕಿನ ದೇವರ ಹುಬ್ಬಳ್ಳಿ, ಮನಸೂರು, ಉಪ್ಪಿನ ಬೆಟಗೇರಿ, ಕೋಟೂರು, ಮಾದನಬಾವಿ, ಪುಡಕಲಕಟ್ಟಿ ಹೀಗೆ ಹತ್ತಾರು ಗ್ರಾಮಗಳಲ್ಲಿ ತುಸು ನೀರಿನ ಸಮಸ್ಯೆ ಉಂಟಾಗಿದೆ. ದೇವರ ಹುಬ್ಬಳ್ಳಿ ಹಾಗೂ ಮಾದನಭಾವಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಗ್ರಾಪಂಗೆ ಕೀಲಿ ಹಾಕಿ ಪ್ರತಿಭಟಿಸಿದ ಘಟನೆಗಳನ್ನು ಸ್ಮರಿಸಬಹುದು. ತಾಲೂಕಿನ ಅಮ್ಮಿನಬಾವಿ, ಉಪ್ಪಿನ ಬೆಟಗೇರಿ, ಮರೇವಾಡ, ಕರಡಿಗುಡ್ಡ ಸೇರಿದಂತೆ 14 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ತಿಯಾಗದ ಕಾರಣ ಈ ಗ್ರಾಮಗಳು ಇನ್ನೂ ಕೊಳವೆ ಬಾವಿಯ ಸವಳು ನೀರು ಕುಡಿಯಬೇಕಾದ ಅನಿವಾರ್ಯ ಉಂಟಾಗಿದೆ. ಉಪ್ಪಿನ ಬೆಟಗೇರಿಯಲ್ಲಿ ಕೊಳವೆ ಬಾವಿಗಳು ಹೆಚ್ಚು ನೀರು ಕೊಡದಿರುವುದರಿಂದ ಹತ್ತು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದೇ ಸಮಸ್ಯೆ ಮರೇವಾಡ, ಕೋಟೂರು ಗ್ರಾಮಗಳಲ್ಲಿದೆ. ಇಲ್ಲಿ ಚಕ್ಕಡಿಗಳ ಮೂಲಕ ಹೊಲದಲ್ಲಿರುವ ಕೊಳವೆ ಬಾವಿಗಳ ಮೂಲಕ ನೀರು ತರಲಾಗುತ್ತಿದೆ.
ನವಲಗುಂದದಲ್ಲಿ ಕೊರತೆಯಿಲ್ಲ
ನವಲಗುಂದ-ಧಾರವಾಡ ಜಿಲ್ಲೆಯ ಕುಂದಗೋಳ, ಕಲಘಟಗಿ, ಹುಬ್ಬಳ್ಳಿ, ಧಾರವಾಡ ತಾಲೂಕುಗಳಲ್ಲಿ ಪ್ರಸಕ್ತ ಬಾರಿ ಕುಡಿಯುವ ನೀರಿನ ತೊಂದರೆಯಾದರೂ ಪ್ರತಿ ಬಾರಿ ನೀರಿಗೆ ಹಾತೊರೆಯುತ್ತಿದ್ದ ನವಲಗುಂದ ತಾಲೂಕಿನ ಜನ ಮಾತ್ರ ಈ ಬಾರಿ ನೀರಿಗಾಗಿ ಪರದಾಡಲಿಲ್ಲ ಎನ್ನುವುದೇ ಸಂತಸದ ವಿಷಯ. ತಾಲೂಕಿನಾದ್ಯಂತ ಕೊಳವೆ ಬಾವಿಗಳಿದ್ದು, ಹೆಚ್ಚಿನವು ಪ್ಲೋರೈಡ್‌ಯುಕ್ತ ನೀರು ಹೊಂದಿದ್ದರಿಂದ ಎಲ್ಲ ಗ್ರಾಮಗಳಲ್ಲಿ ಕೆರೆಗಳಿಗೆ ತೆಗೆಯಿಸಲಾಗಿತ್ತು. ಈ ಕೆರೆಗಳಿಗೆ ಮಲಪ್ರಭಾ ಕಾಲುವೆ ಮೂಲಕ ಕಳೆದ ಮಾರ್ಚ್ ತಿಂಗಳಲ್ಲಿ ನೀರು ಬಿಟ್ಟಿದ್ದು, ಜೂನ್ ಅಂತ್ಯದ ವರೆಗೂ ತಾಲೂಕಿನ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಸಂಗ್ರಹವಿದೆ. ಇನ್ನು ನವಲಗುಂದ ಪಟ್ಟಣಕ್ಕೂ ನೀರಿನ ಸಮಸ್ಯೆ ಉಂಟಾಗಿಲ್ಲ.
-ರವಿ ಕೆ. ಬಡಿಗೇರ