ಉದ್ಯಮ ಕರ್ನಾಟಕ ಪ್ರಶಸ್ತಿ ಪ್ರದಾನ ಇಂದು
ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯು ದಿ. ರಾಮ ಜಾಧವ ಅವರ ಸ್ಮರಣಾರ್ಥ ನೀಡುವ ಗ್ರಂಥ ಪ್ರಶಸ್ತಿ ಪ್ರದಾನವನ್ನು ಮೇ 30ರಂದು ಸಂಜೆ 4ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದೆ. ಲೇಖಕ ಕೆ.ಎನ್. ಭಗವಾನ್ ಅವರ ಉದ್ಯಮ ಕರ್ನಾಟಕ ಗ್ರಂಥಕ್ಕೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ ಜೈನ್ ಮಾಡುತ್ತಾರೆ. ವಿಮರ್ಶಕ ಗಿರಡ್ಡಿ ಗೋವಿಂದರಾಜ ಉದ್ಘಾಟಿಸುತ್ತಾರೆ. ಅತಿಥಿಗಳಾಗಿ ಸುಕನ್ಯಾ ಮಾರುತಿ, ಎಸ್.ಆರ್. ನಮಾಜ, ಎಸ್.ಆರ್. ಜೋಶಿ ವಹಿಸಲಿದ್ದು, ವ.ಚ. ಚನ್ನೇಗೌಡ ಅಧ್ಯಕ್ಷತೆ ವಹಿಸುತ್ತಾರೆ. ಪುಸ್ತಕ ಪರಿಚಯವನ್ನು ರಾ.ನಂ. ಚಂದ್ರಶೇಖರ ಮಾಡುತ್ತಾರೆ ಎಂದು ಜ್ಯೋತಿಬಾ ಖೈರೋಜಿ ತಿಳಿಸಿದ್ದಾರೆ.
ಚಿನ್ನಾಭರಣ ಕಳ್ಳತನ
ಹುಬ್ಬಳ್ಳಿ: ಇಲ್ಲಿನ ಪದ್ಮರಾಜ ನಗರದ ಮನೆಯೊಂದರಲ್ಲಿ ಬಂಗಾರದ 10 ಗ್ರಾಂ ನೆಕ್ಲೆಸ್, 10 ಗ್ರಾಂ ಕಿವಿಯೋಲೆ ಮತ್ತು ಒಂದು ಸ್ಯಾಮ್ಸಂಗ್ ಮೊಬೈಲ್ ಕಳ್ಳತನವಾಗಿದೆ ಎಂದು ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪದ್ಮರಾಜ ನಗರದ ವೀರೇಶ ವಿರೂಪಾಕ್ಷಯ್ಯ ಹಿರೇಮಠ ಬೆಂಗಳೂರಿಗೆ ಹೋಗುವ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆಯಲ್ಲಿ ಬೆಡ್ರೂಂನಲ್ಲಿ ಚಿನ್ನಾಭರಣ ಮತ್ತು ಮೊಬೈಲ್ ಇರಿಸಿದ್ದ ವ್ಯಾನಿಟಿ ಬ್ಯಾಗ್ನ್ನು ಕಳ್ಳರು ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆ ಕಳ್ಳತನ: ಗೋಕುಲ ರಸ್ತೆಯಲ್ಲಿರುವ ಮನೆಯೊಂದರ ಬೀಗ ಮುರಿದ ಕಳ್ಳರು ರು. 24 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಗೋಕುಲ ರೋಡ್ ನಿವಾಸಿ ಶಿವಶಂಕರಯ್ಯ ಶಿವರುದ್ರಯ್ಯ ನಾಗನೂರಮಠ ಇವರ ಸೊಸೆ ರೂಪ ಅವರು ಮನೆಗೆ ಬೀಗ ಹಾಕಿಕೊಂಡು ಜೆಪಿ ನಗರದಲ್ಲಿರುವ ತವರು ಮನೆಗೆ ಹೋಗಿದ್ದರು. ಮರುದಿನ ಬಂದು ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ-ಗಾಯ: ಇಲ್ಲಿನ ಪೆಂಡಾರಗಲ್ಲಿ ಬಳಿ ರಸ್ತೆ ದಾಟುವುದಕ್ಕೆ ನಿಂತಿದ್ದ ಗೌರವ್ವ ರುದ್ರಪ್ಪ ಬಿಕ್ಕಣ್ಣವರಗೆ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಗಾಯಗೊಂಡ ಕುರಿತು ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಡಿಲು ಬಡಿದು ಮಗು ಸಾವು
ಕಲಘಟಗಿ: ತಾಲೂಕಿನ ಅಸ್ತಕಟ್ಟಿಯಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ಮಂಜವ್ವ ಸಿದ್ದಪ್ಪ ನೇಮನವರ(3) ಸಾವನ್ನಪ್ಪಿದ ದುರ್ದೈವಿ. ರಾತ್ರಿ ಮನೆಯಲ್ಲಿ ಮಂಜವ್ವ ಮಲಗಿದ್ದ ಸಂದರ್ಭ ಸಿಡಿಲು ಬಡಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.