ರಸ್ತೆಯಲ್ಲೇ ಗುಂಡಿ ತೋಡಿ ಕೈಬಿಟ್ಟ ಪಾಲಿಕೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 29
ಚಿಕ್ಕ ಸೇತುವೆ ನಿರ್ಮಾಣಕ್ಕೆಂದು ಕಳೆದ ಎರಡುವರೆ ತಿಂಗಳಿಂದ ರಸ್ತೆ ಅಗೆದು ಗುಂಡಿ ತೋಡಿ ಕೈ ಬಿಟ್ಟಿರುವ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ಇಲ್ಲಿನ ಮಾಳಮಡ್ಡಿ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಮಾಳಮಡ್ಡಿ ಪ್ರಮುಖ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ವಿಳಂಬ ನೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಇಲ್ಲಿ ನಿತ್ಯವೂ ನೂರಾರು ವಾಹನಗಳು ಹಾಗೂ ಜನರು ಸಂಚರಿಸುತ್ತಾರೆ. ಎರಡೂವರೆ ತಿಂಗಳ ಹಿಂದೆ ಇಂತಹ ಪ್ರದೇಶದ ಮುಖ್ಯ ರಸ್ತೆಯನ್ನು ಅಗೆದಿರುವ ಮಹಾನಗರ ಪಾಲಿಕೆಯವರು ಅಲ್ಲಿ ಚಿಕ್ಕದೊಂದು ಸೇತುವೆ ನಿರ್ಮಾಣಕ್ಕೆ ಕೈ ಹಾಕಿದೆ.
ಸುಮಾರು ರು. 1.3 ಲಕ್ಷ ವೆಚ್ಚದಲ್ಲಿ 20 ಅಡಿಯಷ್ಟು ಉದ್ದ ಹಾಗೂ ನಾಲ್ಕು ಅಡಿಯಷ್ಟು ಅಗಲವಿರುವ ಈ ಸೇತುವೆ ನಿರ್ಮಾಣ ಮಾಡಲು ಪಾಲಿಕೆಗೆ ಎರಡೂವರೆ ತಿಂಗಳಾದರೂ ಸಾಧ್ಯವಾಗಿಲ್ಲ. ಹೀಗಾಗಿ ಜನರು ಈ ರಸ್ತೆಯ ಮೂಲಕ ಸಂಚರಿಸೋದೇ ಕಷ್ಟವಾಗಿದೆ. ಕೆಲಸ ಆರಂಭವಾದಾಗ ಚುನಾವಣೆ ನೆಪ ಹೇಳಿ ನಿರ್ಲಕ್ಷಿಸಲಾಗಿತ್ತು. ಇನ್ನು ಚುನಾವಣೆ ಮುಗಿದು ತಿಂಗಳು ಸಮೀಪಿಸಿದರೂ ಈ ಕೆಲಸ ಮುಂದುವರೆಸದಿರುವುದು ಸಾರ್ವಜನಿಕರಿಗೆ ಹೇಳತೀರದ ಕಷ್ಟವಾಗಿದೆ.
3 ಕಿ.ಮೀ ಸುತ್ತಾಕಬೇಕು: ಈ ಪ್ರದೇಶದಲ್ಲಿ ರಾಘವೇಂದ್ರಸ್ವಾಮಿ ಮಠ, ವೆಂಕಟೇಶ್ವರ ದೇವಸ್ಥಾನ, ಶ್ರೀರಾಮ ಮಂದಿರ ಹಾಗೂ ನರಸಿಂಹ ದೇವಸ್ಥಾನಗಳು ಇವೆ. ನಗರದ ಬಹುತೇಕ ಜನರು ನಿತ್ಯವೂ ಇಲ್ಲಿಗೆ ಬರುತ್ತಾರೆ.
ಈ ರಸ್ತೆ ಅಗೆದಾಗಿನಿಂದ ಜನರು ಈ ಪ್ರದೇಶಕ್ಕೆ ಬರಬೇಕಾದರೆ ಎರಡು ಕಿ.ಮೀ. ಸುತ್ತು ಹಾಕಿ ಬರಬೇಕು. ಇನ್ನು ವಾಹನ ಸವಾರರ ಪರದಾಟವಂತೂ ತೀರಾ ಕಷ್ಟ. ಪಕ್ಕದಲ್ಲಿಯೇ ಮನೆ ಇದ್ದರೂ ಮೂರು ಕಿ.ಮೀ. ಕ್ರಮಿಸಿ, ತಮ್ಮ ಮನೆ ಸೇರುವ ಸ್ಥಿತಿ ಇದೆ ಎಂದು ಸ್ಥಳೀಯರಾದ ಡಾ. ಶೂರ್ಪಾಲಿ ಬೇಸರ ವ್ಯಕ್ತಪಡಿಸುತ್ತಾರೆ.
ಕೊಳಚೆ ನೀರು..: ಈ ಸಮಸ್ಯೆಗಳೆಲ್ಲ ಒಂದೆಡೆಯಾದ್ರೆ, ಈ ಸೇತುವೆ ನಿರ್ಮಾಣಕ್ಕೆ ರಸ್ತೆ ಅಗೆದಾಗ ಒಳಚರಂಡಿ ಹಾಗೂ ನಲ್ಲಿಗಳ ಪೈಪುಗಳು ಒಡೆದು ಹೋಗಿದ್ದು, ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಒಡೆದ ಒಳ ಚರಂಡಿ ಪೈಪುಗಳಲ್ಲಿ ಮಣ್ಣು ಸೇರಿಕೊಂಡು, ಒತ್ತಡ ಹೆಚ್ಚಾಗಿ ಚೇಂಬರ್ ಮೂಲಕ ನೀರು ಹೊರಬರತೊಡಗಿದೆ. ಕೆಟ್ಟ ವಾಸನೆ ಹಾಗೂ ಕೊಳಚೆ ನೀರಿನ ಕಿರಿಕಿರಿಯಿಂದ ಜನರಿಗೆ ಈ ಕಾಮಗಾರಿ ಏತಕ್ಕೆ ಮಾಡುತ್ತಿದ್ದಾರೆ ಎಂದು ಬೇಸರ ಮೂಡಿದೆ.
ಒಟ್ಟಿನಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಇಲ್ಲಿನ ಜನರು ಪಡುತ್ತಿರುವ ಕಷ್ಟ ಮಾತ್ರ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ಕೂಡಲೇ ಈ ಕಾಮಗಾರಿ ಮುಗಿಸಬೇಕಿದೆ.