ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂಗ್ಲೆಂಡ್‌ನಲ್ಲಿ ಕನ್ನಡಿಗರ ಜಾನಪದ ಗುಂಗು

Lingaraj Badiger
Updated On : 31 May 2013, 12:22 pm

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 30
ಇಂಗ್ಲೆಂಡ್ ದೇಶದ ಸ್ಟೋಕ್ ಆನ್ ಟ್ರೆಂಟ್‌ನಲ್ಲಿ ಮೇ 25 ಹಾಗೂ 26ರಂದು ನಡೆದ ಕನ್ನಡ ಬಳಗದ 30ನೇ ವಾರ್ಷಿಕೋತ್ಸವ ಹಾಗೂ ಯುಗಾದಿಯ ಆಚರಣೆಯಲ್ಲಿ ಕರ್ನಾಟಕದ ಜನಪದ ಗೀತೆಗಳ ಗಾಯನ ಅಲ್ಲಿನ ಜನರಿಗೆ ಇಷ್ಟವಾಯಿತು.
ಖ್ಯಾತ ಜನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರ ತಂಡವು 'ನಾ ಸಂತಿಗೆ ಹೋಗಿನ್ನಿ ಆಕಿ ತಂದಿದ್ದಳು ಬೆಣ್ಣಿ, 'ಸುಳ್ಳೆ ಸುಳ್ಳೋ ಸಂಸಾರದಾಟ' ಎಂಬ ಶರೀಫರ ಗೀತೆಯನ್ನು ಪ್ರಸ್ತುತಪಡಿಸಿದರು. ಈ ತಂಡದಲ್ಲಿದ್ದ ವಿಶ್ವೇಶ್ವರಿ ಹಿರೇಮಠ ಮತ್ತು ತಬಲಾ ವಾದನದಲ್ಲಿ ಅನಿಲ ಮೇತ್ರಿ ಉತ್ತಮ ಸಾಥ್ ನೀಡಿದರು.
ಕನ್ನಡ ಬಳಗದ 30ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ, ಕನ್ನಡ ಭಾಷೆಯ ಉಳಿವು ಮಕ್ಕಳಿಂದ ಮಾತ್ರ ಸಾಧ್ಯ. ಆದ್ದರಿಂದ ಅವರ ಮೂಲಕ ಕನ್ನಡ ಅಭಿವೃದ್ಧಿ ಕೆಲಸ ಮಾಡಬೇಕಿದೆ. ನಮ್ಮ ಸಂಸ್ಕೃತಿಯ ಆಚರಣೆಗಳು ಪ್ರಪಂಚದಲ್ಲಿನ ಎಲ್ಲ ದೇಶಗಳಲ್ಲಿರುವ ಕನ್ನಡಿಗರು ಇದ್ದಲ್ಲಿ ನಡೆದರೆ ಕನ್ನಡ ಭಾಷೆ ಇನ್ನಷ್ಟು ವಿಸ್ತಾರ ಪಡೆದಂತಾಗುತ್ತದೆ ಎಂದರು. ಅತಿಥಿ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕನ್ನಡ ಭಾಷೆಯ ವೈವಿಧ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. ಹಾಸ್ಯ ಕಲಾವಿದ ಪ್ರೊ. ಕೃಷ್ಣೇಗೌಡ ಪ್ರಪಂಚದಲ್ಲಿರುವ ಕನ್ನಡ ಜನರ ಔದಾರ್ಯ ಬಗ್ಗೆ ಚರ್ಚಿಸಿ, ಕನ್ನಡಿಗರು ಎಲ್ಲಿಯೇ ಇದ್ದರೂ ತಮ್ಮತನ ಬಿಟ್ಟು ಕೊಡದೆ ಕನ್ನಡಕ್ಕೆ ಮಾತೃ ಸ್ಥಾನ ನೀಡಬೇಕು ಎಂದರು. ಇದೇ ಸಂದರ್ಭ ಲಂಡನ್ ದೇಶದ ಕನ್ನಡಿಗರು ಹಲವಾರು ರೂಪಕಗಳನ್ನು ಪ್ರದರ್ಶಿಸಿದರು. ಕರ್ನಾಟಕದ ಮತ್ತೊರ್ವ ಖ್ಯಾತ ಗಾಯಕಿ ಅರ್ಚನಾ ಉಡುಪ, ಶ್ರೀನಿವಾಸ ಉಡುಪ ಮತ್ತು ಪ್ರವೀಣ ಡಿ. ರಾವ್ ಅವರ ತಂಡದ ಕಾರ್ಯಕ್ರಮ ಲಂಡನ್ ಕನ್ನಡಿಗರನ್ನು ಆಕರ್ಷಿಸಿತು. ಲಕ್ಷ್ಮೀ ಚಂದ್ರಶೇಖರ ಅವರ ಏಕ ಪಾತ್ರದಲ್ಲಿ ಮೂಡಿಬಂದ ಸಣ್ಣ ನಾಟಕ ಜನರಿಗೆ ಮುದನೀಡಿತು. ಅಕ್ಕಿಕಾಳ ವೆಂಕಟೇಶ ರವರು ಅಕ್ಕಿಕಾಳಿನ ಮೇಲೆ ಬಿಡಿಸಿದ ಚಿತ್ರಕಲೆ ಅಲ್ಲಿಯ ಜನರ ಮನಸೂರೆಗೊಂಡಿತು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಕನ್ನಡ ಬಳಗಕ್ಕೆ ಹೊಸ ಅಧ್ಯಕ್ಷರಾಗಿ ಜಿ. ಜಯರಾಂ, ಕಾರ್ಯದರ್ಶಿ ಆನಂದ ಕೇಶವಮೂರ್ತಿ ಮತ್ತು ಕನ್ನಡ ಬಳಗದ ಖಜಾಂಚಿಯಾಗಿ ಬೆಳಗಾವಿಯ ರಾಜು ಮೇತ್ರಿ ಆಯ್ಕೆಯಾದರು.  ಈ ಉತ್ಸವದಲ್ಲಿ ಪ್ರಪಂಚದ 600 ಜನರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement