ಕಸದ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆ
ಕ.ಪ್ರ.ವಾರ್ತೆ , ಧಾರವಾಡ , ಮೇ 30
ಮೂರ್ನಾಲ್ಕು ದಿನಗಳ ಹಸುಗೂಸೊಂದು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವುದು ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.
ತೊಟ್ಟಿಯಲ್ಲಿದ್ದ ಈ ನವಜಾತ ಹೆಣ್ಣು ಶಿಶುವನ್ನು ನಗರದ ದಯಾ ವಸತಿ ನಿಲಯದ ಹತ್ತಿರದ ಕರಿಯಮ್ಮ ದೇವಸ್ಥಾನದ ಬಳಿಯ ಕಸದ ತೊಟ್ಟಿಯಲ್ಲಿ ಸೋಮವಾರ (ಮೇ 27) ಅನಾಥವಾಗಿ ಬಿಟ್ಟು ಹೋಗಲಾಗಿತ್ತು. ಅಲ್ಲಿಯೇ ಸಮೀಪ ಕೆಲಸಕ್ಕೆಂದು ಹೊರಟಿದ್ದ ಲಕ್ಷ್ಮೀಸಿಂಗನಕೇರಿ ನಿವಾಸಿ ಹಸನಸಾಬ್ ಅಬ್ದುಲ್‌ಸಾಬ್ ಕಟ್ಟಿಮನಿ ಎಂಬವರು ಶಿಶುವನ್ನು ನೋಡಿ ರಕ್ಷಿಸಿದ್ದಾರೆ. ಮೂರು ದಿನಗಳವರೆಗೆ ಹಸನಸಾಬ್ ಮತ್ತು ಪತ್ನಿ ಜುಲೇಖಾ ದಂಪತಿ ಈ ಮಗುವನ್ನು ಚೆನ್ನಾಗಿ ಪಾಲಿಸಿದ್ದಾರೆ. ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಹಾಗೂ 13 ಮೊಮ್ಮಕ್ಕಳನ್ನು ಹೊಂದಿರುವ ಈ ದಂಪತಿ ಈ ಶಿಶುವನ್ನೂ 4ನೇ ಮೊಮ್ಮಗಳನ್ನಾಗಿ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ಕಾನೂನಿನ ಚೌಕಟ್ಟು ಇವರನ್ನು ಕಟ್ಟಿಹಾಕಿದ್ದು, ಮಗುವನ್ನು ಗುರುವಾರ ಉಪನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಈ ಕುರಿತು ದೂರನ್ನು ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು ಶಿಶುವನ್ನು ಜಿಲ್ಲಾಸ್ಪತ್ರೆಗೆ ಆರೈಕೆಗಾಗಿ ಕಳುಹಿಸಲಾಗಿದೆ.