ಹೊಗೆ, ನಿನ್ನಿಂದ ನಮಗೆಂದು ಮುಕ್ತಿ!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 30
ಛೋಟಾ ಮುಂಬೈ ಹೆಸರಿನ ಹುಬ್ಬಳ್ಳಿಯಲ್ಲಿ ಕಲಬೆರಕೆ ಪೆಟ್ರೊಲ್ ದಂಧೆ ಅವ್ಯಾಹತವಾಗಿದೆ. ನಿಯಂತ್ರಿಸಬೇಕಾದ ಅಧಿಕಾರ ವರ್ಗ ನೆಮ್ಮದಿಯಾಗಿ ಕಚೇರಿಯಲ್ಲಿ ಕುಳಿತುಕೊಂಡಿದೆ. ಒಟ್ಟಾರೆ ಹುಬ್ಬಳ್ಳಿ ನಾಗರಿಕನಿಗೆ ಹೊಗೆ ಹಾಕುವ ಈ ಗಾಡಿಗಳಿಂದಾಗಿ ಜೀವನ ಬೇಡ ಅನ್ನಿಸಿ, ಹೊಗೆ ನಿನ್ನಿಂದ ನನಗೆ ಎಂದು ಮುಕ್ತಿ ಎಂದು ಕೇಳುವಂತಾಗಿದೆ.
ಹೌದು! ಇದು ಹುಬ್ಬಳ್ಳಿ ನಗರದ ರಾಣಿ ಚೆನ್ನಮ್ಮ ವೃತ್ತವನ್ನು ಕೇಂದ್ರವಾಗಿಟ್ಟುಕೊಂಡು ಯಾವುದೇ ದಿಕ್ಕಿಗೆ ಹೊರಟರೂ ಒಂದೆರಡು ಕಿಲೋ ಮೀಟರ್ ಕ್ರಮಿಸುವುದರ ಒಳಗೆ ನಿಮ್ಮ ಮುಖಕ್ಕೆ ಕನಿಷ್ಠ ಏನಿಲ್ಲವೆಂದರೂ ನಾಲ್ಕಾರು ಬಾರಿ ಮುಖಕ್ಕೆ ಕಪ್ಪನೆ ಹೊಗೆ ರಪ್ಪನೆ ಬಡಿಯುತ್ತದೆ. ಮುಖ ಸಿಂಡರಿಸಿಕೊಂಡೋ ಇಲ್ಲವೇ ಆ ಕ್ಷಣ ಉಸಿರು ಹಿಡಿದು ದಾಟುವ ನಾಗರಿಕರು ಸ್ವಲ್ಪ ಸ್ವಚ್ಛ ಗಾಳಿ ಕಂಡಕೂಡಲೇ ಉಸ್ಸ್ ಎಂದು ತೇಗುಸಿರು ಬಿಡುತ್ತಾರೆ.
ಇಂತಹ ಕೆಟ್ಟ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ಮಾತ್ರ ನೋಡಲು ಸಾಧ್ಯ. ಕಿರ್ರೋ ಎಂದು ಸಾಗುವ ಟುಸ್ಟ್ರೋಕ್ ಆಟೋಗಳಿಂದ ಹೊರ ಸೂಸುವ ಹೊಗೆಗೆ ಮೂಲ ಕಾರಣ ಕಲಬೆರಕೆ ಪೆಟ್ರೊಲ್. ಛೋಟಾ ಮುಂಬೈ ಎಂದು ಕರೆಸಿಕೊಂಡಿರುವ ಹುಬ್ಬಳ್ಳಿಯಲ್ಲಿ ಮುಂಬೈನಲ್ಲಿ ನಡೆಯುವಷ್ಟೇ ಕಾಳ ದಂಧೆಗಳು ಅವ್ಯಾಹತವಾಗಿ ನಡೆಯುತ್ತವೆ. ಇದರಲ್ಲಿ ಪ್ರಮುಖವಾಗಿರುವುದು ಕಲಬೆರಕೆ ಪೆಟ್ರೊಲ್ ದಂಧೆ. ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳು ಈ ಕರಾಳ ದಂಧೆಯ ಕರಾಳ ಮುಖ ನೋಡಿ ನಿಯಂತ್ರಿಸಲಾಗದೇ ಮೌನಕ್ಕೆ ಶರಣಾಗಿವೆ.
ಬಹುತೇಕ ಆಟೋಗಳು ಒಂದು ಸಿಎನ್ಜಿ ಮತ್ತು ಪೆಟ್ರೊಲ್ ಮೇಲೆ ಓಡುತ್ತವೆ. ನಗರದಲ್ಲಿ ಸಿಎನ್ಜಿ ಫಿಲ್ಲಿಂಗ್ ಸ್ಟೇಷನ್ಗಳಿವೆ, ಆದರೂ ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಆಟೋಗಳು ಗ್ಯಾಸ್ ಮೇಲೂ ಓಡುವಂತೆ ಮಾಡಲಾಗಿದೆ.
ಕೈಕಟ್ಟಿ ಕುಳಿತಿರುವ ಪೊಲೀಸರು: ತಮ್ಮ ಕಣ್ಣೇದುರೆ ಕಿರ್ರೋ ಎಂದು ಹಿಂದಿನವರ ಮುಖಕ್ಕೆ ಕೆಟ್ಟ ಹೊಗೆ ಕಾರುವ ಆಟೋಗಳನ್ನು ನೋಡಿಕೊಂಡು ಪೊಲೀಸ್ ಇಲಾಖೆ ಸುಮ್ಮನೆ ಕೂರುವಂತಾಗಿದೆ. ಏಕೆಂದರೆ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ವಾಹನ ಚಾಲಕರ ಮೇಲೆ ದೂರು ದಾಖಲಿಸಿಕೊಳ್ಳುವುದಕ್ಕೆ ಪೊಲೀಸರಿಗೆ ಅಧಿಕಾರವಿಲ್ಲ. ಎಷ್ಟು ವಿಚಿತ್ರ ನೋಡಿ ಕಲ ಬೆರಕೆ ಪೆಟ್ರೊಲ್ ಸಂಗ್ರಹ, ಮಾರಾಟ, ಸಾಗಾಣಿಕೆ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಕಂಬಿಗಳ ಹಿಂದೆ ತಳ್ಳಲು ಪೊಲೀಸರಿಗೆ ಅಧಿಕಾರವಿದೆ. ಆದರೆ ಅದೇ ನಾಫ್ತಾಲಿನ್ ಮಿಶ್ರಿತ ಸೀಮೆ ಎಣ್ಣೆ, ಕಲಬೆರಕೆ ಪೆಟ್ರೊಲ್ ಹಾಕಿ ವಾಹನಗಳನ್ನು ಓಡಿಸಿ ಜನರ ಜೀವದ ಚೆಲ್ಲಾಟವಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಅಧಿಕಾರವಿಲ್ಲ.
ತಮ್ಮ ಎದುರೇ ಕಿರುಗುಟ್ಟಿ, ಭುರುಗಟ್ಟಿ ಮುಖಕ್ಕೆ ಹೊಗೆ ಹಾಕಿ ಹೋಗುವ ಆಟೋಗಳನ್ನು ತಡೆದು ನಿಲ್ಲಿಸಿ ಕೇಸು ಬರೆಯುವುದಕ್ಕೆ ಅವಕಾಶವಿದ್ದರೂ ಟ್ರಾಫಿಕ್ ಪೊಲೀಸರು ಏನೂ ಮಾಡುವಂತಿಲ್ಲ.
- ಸತೀಶ ಪಾಗಾದ