ಬಿಆರ್ಟಿಎಸ್ ಕಾಮಗಾರಿಗೆ ಭೂಸ್ವಾಧೀನ ಸಮಸ್ಯೆ: ಡಿಸಿ
ಹುಬ್ಬಳ್ಳಿ: ಹು-ಧಾ ಅವಳಿ ನಗರದ ಮಧ್ಯೆ ನಿರ್ಮಾಣವಾಗುತ್ತಿರುವ ಬಿಆರ್ಟಿಎಸ್ ಕಾಮಗಾರಿಗೆ ಸದ್ಯ ಎದುರಾಗಿರುವ ಅತಿ ದೊಡ್ಡ ಸಮಸ್ಯೆ ಎಂದರೆ ಭೂಸ್ವಾಧೀನ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಹೇಳಿದ್ದಾರೆ. ಶುಕ್ರವಾರ, ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸ್ವಾಧೀನ ಪ್ರಶ್ನೆ ಉದ್ಭವಿಸದ 8 ಕಿ.ಮೀ. ಉದ್ದಕ್ಕೂ ಚತುಷ್ಪಥ ರಸ್ತೆ ನಿರ್ಮಿಸಲಾಗಿದೆ. 4 ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗಿದ್ದು, ಈ ಕೆಲಸ ಶೀಘ್ರದಲ್ಲಿಯೇ ನಡೆಯಲಿದೆ. ನವನಗರದ ಕ್ಯಾನ್ಸರ್ ಆಸ್ಪತ್ರೆ ಬಳಿ ಅಂಡರ್ಪಾಸ್ ಸೇರಿದಂತೆ 4 ಕಡೆ ಓವರ್ಬ್ರಿಡ್ಜ್ ನಿರ್ಮಾಣಕ್ಕೆ ವಿನ್ಯಾಸ ಮಾಡಿಕೊಡುವಂತೆ ಅಹ್ಮದಾಬಾದ್ನ ಸ್ಟೇಪ್ ವಿಶ್ವವಿದ್ಯಾಲಯಕ್ಕೆ ಕೇಳಿಕೊಳ್ಳಲಾಗಿದ್ದು, ವಿನ್ಯಾಸ ಕೈ ಸೇರಿದ ನಂತರ ಓವರ್ ಬ್ರೀಡ್ಜ್ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದರು. ಎಪಿಎಂಸಿ ಬಳಿ ಬಿಎಸ್ಎನ್ಎಲ್ನವರು ಡಕ್ ಸ್ಥಳಾಂತರ ಆಗಬೇಕಿರುವ ಕಾರಣ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಿಂತಿದೆ. ಹತ್ತು ದಿನಗಳ ಅವಧಿಯಲ್ಲಿ ಚತುಷ್ಪಥ ರಸ್ತೆಗೆ ಸಂಪರ್ಕ ರಸ್ತೆಗಳನ್ನು ಜೋಡಿಸಲಾಗುವುದು ಎಂದರು. ಅವಳಿ ನಗರದ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಮೊದಲನೇ ಹಂತದಲ್ಲಿ 36 ಕೋಟಿಗಳ ಅಂದಾಜು ವೆಚ್ಚದಲ್ಲಿ 35.5 ಕಿ.ಮೀ. ಆಗಬೇಕಿತ್ತು. ಅದರಲ್ಲಿ ಇಲ್ಲಿಯವರೆಗೆ 19 ಕಿ.ಮೀ ಮಾತ್ರ ಆಗಿದ್ದು. 8 ಕಿ.ಮೀ. ಒಳಚರಂಡಿ ಇನ್ನೂ ಬಾಕಿ ಇದೆ. ಎರಡನೇ ಹಂತದಲ್ಲಿ 48.26 ಕೋಟಿಗಳ ವೆಚ್ಚದಲ್ಲಿ 59.9 ಕಿ.ಮೀ. ಒಳಚರಂಡಿ ನಿರ್ಮಿಸಬೇಕಿತ್ತು. ಅದರ ಪೈಕಿ 32 ಕಿ.ಮೀ. ಪೂರ್ಣಗೊಂಡಿದ್ದು, 16 ಕಿ.ಮೀ. ಬಾಕಿ ಇದೆ ಎಂದು ಹೇಳಿದರು.
ಜವಳಿ ಗಿರಣಿ ಜಮೀನು ಮಾರಾಟಕ್ಕೆ ಯತ್ನ
ಹುಬ್ಬಳ್ಳಿ: ನಗರದ ಮಹದೇವ ಜವಳಿ ಗಿರಣಿ ಒಡೆತನಕ್ಕೆ ಸೇರಿದ ಸಾವಿರಾರು ಕೋಟಿ ಮೌಲ್ಯದ ಭೂಮಿ ಕಬಳಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿದ್ದು, ಈ ಜಮೀನು ಉಳಿಸಿಕೊಳ್ಳಲು ಸರ್ಕಾರ ಮುಂದಾಗಬೇಕೆಂದು ಮಹಾನಗರ ಪಾಲಿಕೆ ಸದಸ್ಯ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ ಹಿರೇಮನಿ ಆಗ್ರಹಿಸಿದ್ದಾರೆ. ಈ ಹಿಂದೆ ಮಹಾದೇವ ಜವಳಿ ಗಿರಣಿ ನೂರಾರು ವರ್ಷ ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತು. ಉತ್ಪಾದನೆ ಸ್ಥಗಿತವಾಗಿದ್ದರಿಂದ ಜವಳಿ ಗಿರಣಿ ಮುಚ್ಚಲ್ಪಟ್ಟಿತು. ಅನೇಕ ಕಾರ್ಮಿಕರ ಹೋರಾಟದಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ಇಲ್ಲಿನ ಕಾರ್ಮಿಕರಿಗೆ ರು. 5.30 ಲಕ್ಷ ಪರಿಹಾರ ನೀಡಿತ್ತು. ಜವಳಿ ಗಿರಣಿಗೆ ಬೀಗಮುದ್ರೆ ಹಾಕಿದ ನಂತರ ಇಲ್ಲಿನ ಕಾರ್ಮಿಕರಿಗೆ ಪಿಂಚಣಿ ನೀಡುವ ಬಗ್ಗೆ ಈ ಹಿಂದೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಡಲಾಗಿತ್ತು. ನಿರ್ಗಮಿತ ಬಿಜೆಪಿ ಸರ್ಕಾರ ಕಾರ್ಮಿಕರಿಗೆ ಪಿಂಚಣಿ ನೀಡಲಿಲ್ಲ. ಹಾಲಿ ಸರ್ಕಾರ ಕಾರ್ಮಿಕರಿಗೆ ತಕ್ಷಣ ಪಿಂಚಣಿ ನೀಡಬೇಕು. ಜವಳಿ ಗಿರಣಿ ಭೂಮಿ ಮಾರಾಟ ತಡೆದು, ಗಿರಣಿ ಕಾರ್ಮಿಕರಿಗೆ ಅಲ್ಲಿ ನಿವೇಶನ ನಿರ್ಮಿಸಿ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಮಿತಿಮೀರಿದ ಡೊನೇಷನ್ ಸಂಗ್ರಹ: ಕರವೇ ಧರಣಿ
ಧಾರವಾಡ: ನಗರದ ವಿವಿಧ ಖಾಸಗಿ ಕಾಲೇಜುಗಳು ಮಿತಿಮೀರಿ ಡೊನೇಷನ್ ಹಣ ಸಂಗ್ರಹಿಸುತ್ತಿವೆ ಎಂದು ಕರವೇ ವಿದ್ಯಾರ್ಥಿ ಘಟಕ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಮೀಪದ ನುಗ್ಗಿಕೇರಿ ಬಳಿಯ ವಿದ್ಯಾ ಪಿ. ಹಂಚಿನಮನಿ ಕಾಲೇಜು ಓರ್ವ ವಿದ್ಯಾರ್ಥಿ ಶೇ. 80- 90 ಅಂಕ ಗಳಿಸಿದ್ದರೂ ರು. 50ರಿಂದ 80 ಸಾವಿರ ಹಣ ಪಡೆಯುತ್ತಿದೆ. ನಗರದಲ್ಲಿ ಇಷ್ಟು ದಿನ ಟ್ಯುಶನ್ ಹೇಳಿಕೊಡುತ್ತಿದ್ದವರು ಈಗ ಶಾಲೆಗಳನ್ನು ತೆರೆದು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪದವಿಪೂರ್ವ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪದಾಧಿಕಾರಿಗಳು ಕಾಲೇಜಿಗೆ ಹೋಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಡಿಡಿಪಿಐ ರವೀಂದ್ರ ರಿತ್ತಿಗೆ ಮನವಿ ನೀಡಿದರು. ಬಡ ಮಕ್ಕಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ಶಿಕ್ಷಣ ಸಂಸ್ಥೆಗಳು ಬಡಮಕ್ಕಳ ಕನಿಕರ ತೋರಬೇಕೆಂದು ಕರವೇ ವಿದ್ಯಾರ್ಥಿ ಘಟಕದ ಶಿವಸೋಮಣ್ಣ ನಿಟ್ಟೂರು, ಮಂಜುನಾಥ ಶಿಶುನಿನಹಾಳ, ವಿಠ್ಠಲ ಕುಂಬಾರಕಣವಿ, ಆಜಾದ ಜಾಲಗಾರ, ಪರಮೇಶ ರೇವಡಿಹಾಳ, ಮಾರುತಿ ಬೆಳ್ಳಿಗಟ್ಟಿ, ಸಲೀಂ ಶೇಖಸನದಿ ಮತ್ತಿತರರು ಧರಣಿಯಲ್ಲಿದ್ದರು.