ಕನ್ನಡ ಪರ ಕಾರ್ಯಗಳ ಅನುಷ್ಠಾನಕ್ಕೆ ಒತ್ತಾಯ: ಪಾಪು
ಧಾರವಾಡ: ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗಳ ಬಗ್ಗೆ ಆಡಿದ ಮಾತುಗಳನ್ನು ಕಾರ್ಯರೂಪಕ್ಕೆ ತಂದು, ಸಿಂಹಾಸನದ ಮೇಲೆ ಪ್ರತಿಷ್ಠಾಪನೆಗೊಳಿಸುವ ಕೆಲಸ ಮುಖ್ಯಮಂತ್ರಿ, ಶಾಸಕರು ಹಾಗೂ ಅಧಿಕಾರಿಗಳು ಮಾಡಬೇಕೆಂದು ಡಾ. ಪಾಟೀಲ ಪುಟ್ಟಪ್ಪ ಒತ್ತಾಯಿಸಿದ್ದಾರೆ.
ರಾಜೋತ್ಸವ ದಿನದಂದು ಕನ್ನಡದ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಅತ್ಯದ್ಭುತ ಭಾಷಣಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದು, ಕನ್ನಡ ಪರ ಕೆಲ ಕಾರ್ಯಗಳ ಅನುಷ್ಠಾನಕ್ಕೆ ಪಾಪು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳ ಆಶಯದಂತೆ ನಮ್ಮ ರಾಜ್ಯದಲ್ಲಿ ಜನಪ್ರತಿನಿಧಿಗಳು ಆಡಿದ ಮಾತುಗಳು ನೆರವೇರಬೇಕು. ಅಲ್ಲದೇ, ಕನ್ನಡವು ಆಡಳಿತದಲ್ಲಿ ಸಮಗ್ರವಾಗಿ ಬರಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕನ್ನಡ ರಾಜ್ಯದಲ್ಲಿ ಶಿಕ್ಷಣ ಮಾಧ್ಯಮವಾಗಿ ವಿಜೃಂಭಿಸಬೇಕಿದ್ದು, ಪರಭಾಷೆಯ ಜನರು ಕನ್ನಡವನ್ನು ಕಲಿಯುವ ಮೂಲಕ ಕರ್ನಾಟಕದ ಜೀವವಾಹಿನಿಯಲ್ಲಿ ಬದುಕಬೇಕು. ಎಲ್ಲ ಭಾಷೆಗಳು ಭಾರತವನ್ನು ಪ್ರತಿಬಿಂಬಿಸುವ ಭಾಷೆಗಳೇ ಆಗಿವೆ. ಅವುಗಳನ್ನು ತಾವು ಪ್ರೀತಿಸುತ್ತೇವೆ. ಇಂಗ್ಲಿಷ್ ಭಾಷೆಯನ್ನು ಭಾಷೆಯನ್ನಾಗಿ ಕಲಿಬೇಕು. ಆದರೆ, ಶಿಕ್ಷಣ ಮಾಧ್ಯಮವಾಗಿ ಮಾತ್ರ ಅದು ಬರಬಾರದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರು ರಾಜ್ಯದಲ್ಲಿ ಕನ್ನಡವು ಏನಾಗಬೇಕೆಂಬುದರ ಸ್ಪಷ್ಟ ಕಲ್ಪನೆಯನ್ನು ಇರಿಸಿಕೊಂಡಿದ್ದು, ಕನ್ನಡ ಭಾಷೆಯ ಯಾವ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳ ಸಂಖ್ಯೆಯ ಕಾರಣದಿಂದ ಮುಚ್ಚುವುದಿಲ್ಲ ಎಂದು ನಮಗೆಲ್ಲ ಅಭಿಮಾನವನ್ನು ಕೊಟ್ಟಿದ್ದಾರೆ. ಕನ್ನಡ ಭಾಷೆ ಸುಂದರ ಹಾಗೂ ಪರಿಪೂರ್ಣವಾದ ಭಾಷೆಯಾಗಿದೆ. ಜಗತ್ತಿನ ಯಾವ ಭಾಷೆಗೂ ಇಲ್ಲದ ಎಲ್ಲ ಧ್ವನಿಗಳನ್ನು ಯಥಾವತ್ತಾಗಿ ಅಭಿವ್ಯಕ್ತಪಡಿಸುವ ಅನಾದೃಶ್ಯ ಸಾಮರ್ಥ್ಯ ಕನ್ನಡ ಭಾಷೆಗೆ ಇದೆ ಎಂದು ಡಾ. ಪಾಟೀಲ ಪುಟ್ಟಪ್ಪ ಪತ್ರದಲ್ಲಿ ತಿಳಿಸಿದ್ದಾರೆ.