ಜೂಜಾಟ: 15 ಜನರ ಸೆರೆ
ಧಾರವಾಡ: ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶ ಹಾಗೂ ಶಿಂಗನಹಳ್ಳಿ ಗ್ರಾಮದಲ್ಲಿ ಪ್ರತ್ಯೇಕ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಒಟ್ಟು 15 ಜನರನ್ನು ಬಂಧಿಸುವಲ್ಲಿ ಗರಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೇಲೂರು ಕೈಗಾರಿಕೆ ಪ್ರದೇಶದಲ್ಲಿ ಜೂಜಾಟವಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಎಂಟು ಜನರನ್ನು ಬಂಧಿಸಿದ್ದು, ಬಂಧಿತರಿಂದ ರು. 1440 ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಶಿಂಗನಹಳ್ಳಿ ಗ್ರಾಮದ ಕೆರೆಯ ಬಳಿಯ ಜೂಜಾಟದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ. ಹಾಗೆಯೇ, ಬಂಧಿತರಿಂದ ರು. 1640 ನಗದು ಮತ್ತು ಜೂಜಾಟದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಗರಗ ಠಾಣೆಯ ಪಿಎಸ್ಐ ಟಿ. ವೆಂಕಟಸ್ವಾಮಿ ನೇತೃತ್ವದಲ್ಲಿ ಠಾಣಾ ಸಿಬ್ಬಂದಿ ದಾಳಿ ನಡೆಸಿದ್ದು, ಗರಗ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಪನಗರ ಠಾಣೆಯಿಂದ ಎರಡು ಕಡೆ ದಾಳಿ
ಧಾರವಾಡ: ಇಸ್ಪೀಟ್ ಜೂಜಾಟಕ್ಕೆ ಸಂಬಂಧಿಸಿದಂತೆ ಎರಡು ಕಡೆ ದಾಳಿ ನಡೆಸಿದ ಉಪನಗರ ಠಾಣೆ ಪೊಲೀಸರು ಶನಿವಾರ ರಾತ್ರಿ 9 ಜನರನ್ನು ಬಂಧಿಸಿದ್ದಾರೆ. ಇಲ್ಲಿನ ದಾಸನಕೊಪ್ಪ ವೃತ್ತದ ಬಳಿಯ ನೀಲಗಿರಿ ತೋಪಿನಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ರು. 8800 ನಗದು ಮತ್ತು ಜೂಜಾಟ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಬೆಳಗಾವಿ ರಸ್ತೆಯಲ್ಲಿರುವ ಪೆಪ್ಸಿ ಕಂಪನಿ ಬಳಿ ಖುಲ್ಲಾ ಜಾಗೆಯಲ್ಲಿ ಜೂಜಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ರು. 5550 ನಗದು ಮತ್ತು ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಎಸಿಪಿ ಎಸ್.ಎಚ್. ಕೇರಿ ಮಾರ್ಗದರ್ಶನದಲ್ಲಿ ಉಪನಗರ ಠಾಣಾ ಸಿಪಿಐ ರಾಮನಗೌಡ ಹಟ್ಟಿ, ಪಿಎಸ್ಐ ಐ.ಎಂ. ದುಂಡಸಿ ಮತ್ತು ಸಿಬ್ಬಂದಿ ಎಸ್.ಎಸ್. ಮಠದ, ಪ್ರದೀಪ ಕುಂದಗೋಳ, ಚಂದ್ರು ನಡುವಿನಮನಿ, ಶಶಿ ನೀಲಣ್ಣವರ, ಎಸ್.ಕೆ. ಮಾನಕರ, ಆರ್.ಎಸ್. ಗುಂಜಾಳ ದಾಳಿ ನಡೆಸಿದ್ದರು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ್: ಐವರ ಬಂಧನ
ಧಾರವಾಡ: ಮಾಳಮಡ್ಡಿ ಪ್ರದೇಶದಲ್ಲಿ ಇಸ್ಪೀಟು ಜೂಜಾಟವಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ವಿದ್ಯಾಗಿರಿ ಠಾಣೆ ಪೊಲೀಸರು 5 ಜನರನ್ನು ಶನಿವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ ರು. 10,300 ನಗದು ಮತ್ತು ಜೂಜಾಟ ಸಲಕರಣೆಗಳನ್ನು ದಾಳಿ ವೇಳೆ ವಶಪಡಿಸಿಕೊಂಡಿದ್ದಾರೆ. ಸಿಪಿಐ ಬಿ.ಟಿ. ಚನ್ನಕೇಶವ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಡಿವಾಳಪ್ಪ ನಿಧನ
ಧಾರವಾಡ: ತಾಲೂಕಿನ ಕರಡಿಗುಡ್ಡದ ಮಡಿವಾಳಪ್ಪ ಭೀಮಪ್ಪ ಕೆಂಪಸಣ್ಣವರ (85) ಶುಕ್ರವಾರ ನಿಧನರಾದರು. ಮೃತರಿಗೆ ಪುತ್ರ, ಮೊಮ್ಮಕ್ಕಳು, ಬಂಧು-ಬಳಗ ಇದ್ದಾರೆ.