ಬೆಲೆ ಏರಿಕೆಗೆ ಬಿಸಿಯಾಗದ ಶ್ರೀಸಾಮಾನ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 3
ಒಂದು ಕಡೆ ಹಬ್ಬದ ಸಂತಸ, ಇನ್ನೊಂದು ಕಡೆ ಬೆಲೆ ಏರಿಕೆಯ ಬಿಸಿ, ನಗುನಗುತ್ತಾ ಹಬ್ಬ ಮಾಡೋಣ ಅಂದ್ರೆ ಹೂ ಹಣ್ಣುಗಳ ದರ ಕೇಳಿ ಬೆಸ್ತು ಬೀಳುವಂತಾಗಿದ್ದು ಶ್ರೀಸಾಮಾನ್ಯ.
ದೀಪಾವಳಿಯನ್ನು ಸಡಗರದಿಂದ ಆಚರಿಸಿ, ಧನ, ಕನಕ, ಐಶ್ವರ್ಯದ ಸಂಕೇತವಾಗಿರುವ ಮಹಾಲಕ್ಷ್ಮಿ ಪೂಜೆಯನ್ನು ಅದ್ಧೂರಿಯಿಂದ ಮಾಡಿ ಬರ ಮಾಡಿಕೊಳ್ಳೊಣ ಎಂದರೆ, ಕಬ್ಬು, ತೆಂಗಿನಕಾಯಿ ದರ ಕೇಳಿದ ಗ್ರಾಹಕ ಒಂದರೆಕ್ಷಣವಾದರೂ ತುಟ್ಟಿ ಆತು ಬಿಡ್ರಿ ದೀಪಾವಳಿ ಎಂದು ಯೋಚಿಸಿರಲಿಕ್ಕೂ ಸಾಕು.
ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪೂಜಾ ಸಾಮಗ್ರಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ಬೇಸಿಗೆಯಲ್ಲಿ ಮಾತ್ರ ಏರುಗತಿಯಲ್ಲಿ ಲಿಂಬೆ ಹಣ್ಣು ಇನ್ನು ಮಾಗಿಯ ಚಳಿಗಾಲ ಬಂದಿಲ್ಲ ಈಗಾಗಲೇ ಲಿಂಬೆಯೊಂದರ ಬೆಲೆ ರು. 5ರ ಆಸುಪಾಸಿನಲ್ಲಿ ನಿಂತಿದೆ. ಐದು ಕಬ್ಬುಗಳಿಗೆ ನೂರು- ನೂರೈವತ್ತರ ಗಡಿ ದಾಟಿದೆ. ಚೆಂಡು ಹೂವು ರು. 80ಕ್ಕೆ ಒಂದು ಮಾರು, ತೆಂಗಿನಕಾಯಿ ಬೆಲೆ ರು. 15, ಡಜನ್ ಪಚ್ಚ ಬಾಳೆ ಹಣ್ಣಿಗೆ ರು. 40, ಒಂದು ಮಾರು ಸೇವಂತಿ ಮತ್ತು ಗುಲಾಬಿ ಹೂವಿಗೆ ರು. 60, ಜೋಡಿ ಬಾಳೆ ಗಿಡಕ್ಕೆ ರು. 40-50 ಇದ್ದು, ನಗರವಾಸಿಗಳಿಗೆ ಪ್ರತಿಯೊಂದನ್ನು ಖರೀದಿಸಿಯೇ ತರಬೇಕು. ಹಬ್ಬದ ಸಡಗರ ಮನೆಯಲ್ಲಿ ಕಾಣಬೇಕು ಎಂದರೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲೇಬೇಕು. ಪರಿಸ್ಥಿತಿ ಹೀಗಿದ್ದ ಮೇಲೆ ನಗರವಾಸಿಗಳು ಅನಿವಾರ್ಯವಾಗಿ ಬೆಲೆ ಹೆಚ್ಚಾದರೂ ಸರಿ, ಕಡಿಮೆಯಾದರೂ ಸರಿ ಖರೀದಿಸಲೇಬೇಕು.
ಒಂದು ಕಡೆ ಬೆಲೆ ಏರಿಕೆ ಬಿಸಿ ತಾಗುತ್ತಿದ್ದರೂ ಹುಬ್ಬಳ್ಳಿಯಲ್ಲಿ ಹಬ್ಬದ ಸಡಗರಕ್ಕೆ ಕೊರತೆ ಏನೂ ಇರಲಿಲ್ಲ. ರಾಜ್ಯದ ವಾಣಿಜ್ಯ ರಾಜಧಾನಿ ಎಂದು ಹೆಸರು ಪಡೆದುಕೊಂಡು ಅದಕ್ಕೆ ತಕ್ಕಂತೆ ದೀಪಾವಳಿ ಹಬ್ಬವನ್ನು ಆಚರಿಸಿದರು.
ನರಕ ಚತುರ್ದಶಿ ದಿನದಿಂದ ಆರಂಭವಾಗಿರುವ ಹುಬ್ಬಳ್ಳಿಗರ ಖರೀದಿ ಈ ಬಾರಿ ಜೋರಾಗಿತ್ತು. ದುರ್ಗದ್ಬೈಲ್, ಜನತಾ ಬಜಾರ್, ಗೋಕುಲ್ ರಸ್ತೆ, ಕೇಶ್ವಾಪುರ, ಉಣಕಲ್ ಕ್ರಾಸ್, ಧಾರವಾಡ ನಗರದ ಸುಭಾಷ್ ರಸ್ತೆ, ಸಾಧನಕೇರಿ, ಟೋಲ್ ನಾಕಾ ಸೇರಿದಂತೆ ಅವಳಿ ನಗರದ ಪ್ರಮುಖ ಪ್ರದೇಶಗಳಲ್ಲಿ ಕಬ್ಬು, ಬಾಳೆ, ಹೂವು, ಹಣ್ಣುಗಳ ವ್ಯಾಪಾರ ಜೋರಾಗಿತ್ತು.