ಮತ್ತೆ ಶೂಟೌಟ್: ಸಾರ್ವಜನಿಕರಲ್ಲಿ ಆತಂಕ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 3
ಕಲಘಟಗಿ ತಾಲೂಕಿನ ಉಗ್ನಿಕೇರಿ ಬಳಿ ದರ್ಗಾ ಪಕ್ಕ ಶನಿವಾರ ರಾತ್ರಿ ಸಂಭವಿಸಿರುವ ಗುಂಡಿನ ದಾಳಿ ದೀಪಾವಳಿ ಆಚರಣೆ ಸಂಭ್ರಮದಲ್ಲಿದ್ದ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.
ಕುಡಿಯುವ ನೀರು ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಕಮರ್ ಅಲಿ ಶಾ ದರ್ಗಾದ ಮೌಲಾ ಖಲೀಲ ಅಹ್ಮದ ಶೇಖ (38) ಎಂಬುವವರ ಮೇಲೆ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಬೆಳೆ ಕಾಯುವುದಕ್ಕಾಗಿ ರಾತ್ರಿ ಹೊಲದಲ್ಲಿಯೇ ಮಲಗಿಕೊಳ್ಳುವ ರೈತರಲ್ಲಿ ಈ ಘಟನೆ ಭೀತಿ ಮೂಡಿಸಿದೆ. ರಾತ್ರಿ ಬರುವ ಅಪರಿಚಿತರಿಗೆ ಯಾವುದೇ ರೀತಿಯ ಸಹಾಯ ಮಾಡದಂತೆಯೂ ಈ ಪ್ರಕರಣ ಎಚ್ಚರಿಕೆ ನೀಡಿದಂತಿದೆ.
ಖಚಿತ ಕಾರಣ ಗೊತ್ತಾಗಿಲ್ಲ: ದರ್ಗಾದ ಮೌಲಾನ ಮೇಲೆ ನಡೆದ ಗುಂಡಿನ ದಾಳಿಗೆ ಖಚಿತ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಮೌಲಾ ಖಲೀಲ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್ನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆತನಿಗೆ ಪ್ರಜ್ಞೆ ಬಂದ ಮೇಲೆಯೇ ನೈಜ ಕಾರಣ ಬಹಿರಂಗಗೊಳ್ಳಲಿದೆ. ದರ್ಗಾದ ಮೌಲಾನ ಮೇಲೆ ಗುಂಡಿನ ದಾಳಿ ನಡೆಸಬೇಕಾದಲ್ಲಿ ಹಳೆಯ ಹಗೆತನ ಅಥವಾ ಇನ್ನಿತರ ಗಂಭೀರ ಕಾರಣ ಇರದೇ ಇರದು.
ವರ್ಷದಲ್ಲಿ ಒಂದೋ ಅಥವಾ ಅದಕ್ಕಿಂತಲೂ ಹೆಚ್ಚು ಇಂಥ ಗುಂಡಿನ ದಾಳಿ ಕಳೆದ ಎರಡ್ಮೂರು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಅದರಗುಂಚಿ ಬಳಿಯ ಕರಡಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ರಾತ್ರಿ ಗುಂಡಿನ ದಾಳಿ ನಡೆಸಿ, ಆತನ ಸಾವಿಗೆ ಕಾರಣರಾಗಿದ್ದ ಅಪರಿಚಿತರು ಇದುವರೆಗೂ ಪತ್ತೆಯಾಗಿಲ್ಲ.
ಇನ್ನುವರೆಗೂ ಪತ್ತೆಯಾಗಿಲ್ಲ: ಸುಮಾರು ಆರು ತಿಂಗಳ ಹಿಂದೆ ಧಾರವಾಡ ತಾಲೂಕಿನ ಕಬ್ಬೇನೂರ ದಾಬಾದಲ್ಲಿ 5-6 ಜನರ ಯುವಕರ ತಂಡ ಹುಸಿ ಗುಂಡು ಹಾರಿಸಿದ್ದರು. ಕಳೆದ ವರ್ಷ ಧಾರವಾಡ ಸಮೀಪದ ಎತ್ತಿನಗುಡ್ಡದಲ್ಲಿಯೂ ಗುಂಡಿನ ದಾಳಿ ನಡೆದಿದ್ದನ್ನು ಸ್ಮರಿಸಬಹುದು. ಮೇಲಿಂದ ಮೇಲೆ ನಡೆಯುತ್ತಿರುವ ಈ ರೀತಿಯ ಗುಂಡಿನ ದಾಳಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗುಂಡು ಹಾರಿಸಿ ತಪ್ಪಿಸಿಕೊಂಡಿರುವ ಕೆಲ ಆರೋಪಿಗಳು ಇದುವರೆಗೂ ಪತ್ತೆಯಾಗದಿರುವುದೂ ಈ ಆತಂಕ ಮತ್ತಷ್ಟು ಹೆಚ್ಚಲು ಕಾರಣ.
ಗುಮಾನಿ: ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಗುಂಡಿನ ದಾಳಿಯಲ್ಲಿ ಬಹುತೇಕ ಪ್ರಕರಣಗಳು ಪತ್ತೆಯಾಗದ ಕಾರಣ ಈ ಪ್ರಕರಣವೂ ಬೆಳಕಿಗೆ ಬರುವುದೋ ಅಥವಾ ಇಲ್ಲವೋ ಎಂಬ ಆತಂಕವೂ ಸಾರ್ವಜನಿಕರನ್ನು ಕಾಡುತ್ತಿದೆ. ಅದರಲ್ಲಿಯೂ ಕಲಘಟಗಿ ತಾಲೂಕಿನಲ್ಲಿ ಯುವತಿಯರ ಮಾರಾಟ ಹಾಗೂ ಮತ್ತಿತರ ಪ್ರಕರಣಗಳು ಹೆಚ್ಚಾಗಿವೆ. ಕೆಲ ವರ್ಷಗಳ ಹಿಂದೆ ಕಲಘಟಗಿ ಅರಣ್ಯ ಪ್ರದೇಶದಲ್ಲಿ ಶಂಕಿತ ಉಗ್ರಗಾಮಿಗಳು ತಂಗಿದ್ದು, ಈ ಕುರಿತು ಪೊಲೀಸ್ ತನಿಖೆಯೂ ನಡೆದಿತ್ತು. ಈ ಮಧ್ಯೆ ಲೈಸೆನ್ಸ್ ಪಡೆಯದೇ ಹಲವಾರು ವ್ಯಕ್ತಿಗಳು ಪಿಸ್ತೂಲ್ ಹಾಗೂ ಮತ್ತಿತರ ಆಯುಧಗಳನ್ನು ಹೊಂದಿರುವ ಗುಮಾನಿಯೂ ಇದೆ. ಲೈಸೆನ್ಸ್ ಪಡೆಯದೇ ಮಾರಕಾಸ್ತ್ರಗಳನ್ನು ಹೊಂದಿರುವವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವೂ ಇರುವುದರಲ್ಲಿ ಸಂಶಯವೇ ಇಲ್ಲ.
ವಿಶೇಷ ವರದಿ