ಹುಬ್ಬಳ್ಳಿ: ದರ್ಗಾದ ಮೌಲಾ ಮೇಲೆ ಗುಂಡಿನ ದಾಳಿ
ಹುಬ್ಬಳ್ಳಿ: ಕುಡಿಯಲು ನೀರು ಕೇಳುವ ನೆಪದಲ್ಲಿ ದರ್ಗಾದ ಮೌಲಾ ಒಬ್ಬರ ಮೇಲೆ ಅಪರಿಚಿತರು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆ ಕಲಘಟಗಿ ತಾಲೂಕಿನ ಉಗ್ನಿಕೇರಿ ಗ್ರಾಮದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಉಗ್ನಿಕೇರಿ ಗ್ರಾಮದ ಬಳಿ ಹೆದ್ದಾರಿ ಪಕ್ಕದ ಕಮರ್ ಅಲಿ ಶಾ ದರ್ಗಾದ ಮೌಲಾ (ಮುಜಾವರ) ಖಲೀಲ ಅಹ್ಮದ ಶೇಖ (38) ಎಂಬುವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ದಾಳಿಗೆ ಕಾರಣ ತಿಳಿದು ಬಂದಿಲ್ಲ.
ಶನಿವಾರ ಸುಮಾರು ರಾತ್ರಿ 8.30ಕ್ಕೆ ದರ್ಗಾ ಬಳಿ ಮೌಲಾ ವಾಸವಾಗಿದ್ದ ಮನೆಗೆ ಬಂದ ಮೂವರು ಕುಡಿಯಲು ನೀರು ಕೇಳಲು ಮನೆಯ ಬಾಗಿಲು ತಟ್ಟಿದ್ದರು. ಬಾಗಿಲ ತೆಗೆದ ಖಲೀಲ ಅಹ್ಮದ್, ನೀರಿರುವ ಜಗ್ನ್ ತೆಗೆದುಕೊಂಡು ಅವರೊಂದಿಗೆ ಸಮೀಪದ ಕಾಲುದಾರಿಯವರೆಗೆ ಹೋಗಿದ್ದರು. ಆಗಲೇ ದುಷ್ಕರ್ಮಿಗಳು ಪಿಸ್ತೂಲಿನಿಂದ ಮೂರು ಬಾರಿ ಗುಂಡು ಹಾರಿಸಿದ್ದಾರೆ.
ಏಕಾಏಕಿ ನಡೆದ ಗುಂಡಿನ ದಾಳಿಯಿಂದ ಆತಂಕಕ್ಕೀಡಾದ ಖಲೀಲ್, ಚೀರುತ್ತ ತನ್ನ ಮನೆಯತ್ತ ಓಡಿ ಹೋಗಿ ಬಾಗಿಲ ಬಳಿ ಬಿದ್ದಿದ್ದಾನೆ. ಮೂರು ಗುಂಡುಗಳಲ್ಲಿ ಒಂದು ಗುಂಡು ಎದೆ ಮತ್ತು ಮತ್ತೊಂದು ಗುಂಡು ಪಕ್ಕೆಲುಬಿಗೆ ತಗುಲಿವೆ.
ತೀವ್ರ ಗಾಯಗೊಂಡಿರುವ ಖಲೀಲ್ ಕಿಮ್ಸ್ನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದರ್ಗಾಕ್ಕೆ ಹೊಂದಿಕೊಂಡಿರುವ ಜಮೀನಿನ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ವಾಸವಾಗಿರುವ ಖಲೀಲ್, ಮೂಲತಃ ಹುಬ್ಬಳ್ಳಿಯ ನೆಹರು ನಗರದ ನಿವಾಸಿ.
ಖಲೀಲ್ ಪತ್ನಿ ಕಲಘಟಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.