ವಿಶ್ವಜ್ಯೋತಿ ಯುವಕ ಮಂಡಳ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ, ಅಣ್ಣಿಗೇರಿ, ನ. 4
ಸ್ಥಳೀಯ ಹಾಳದೋಟರ ಓಣಿಯ ಯುವಕರ ಬಳಗದ ವಿಶ್ವಜ್ಯೋತಿ ಯುವಕ ಮಂಡಳ ಕಟ್ಟಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಯುವಕರು ಕ್ರಿಯಾಶೀಲ ಚಟುವಟಿಕೆ ಮೂಲಕ ಸಮಾಜದ ಹಿತಾಸಕ್ತಿ ಕಾಪಾಡುವಲ್ಲಿ ಹೊಸ ಆವಿಷ್ಕಾರಗಳ ಮೂಲಕ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ಗ್ರಾಮೀಣ ಸಂಸ್ಕೃತಿಯ ಸೊಡಗನ್ನು ಉಳಿಸಿ, ಬೆಳೆಸುವಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸನ್ನಢತೆಯಲ್ಲಿ ಯುವ ಪೀಳಿಗೆ ದುರ್ಗುಣ ದುಶ್ಚಟಗಳಿಂದ ಮುಕ್ತರಾಗಿ ಜಾಗೃತರಾಗುವಂತೆ ತೊಡಗಬೇಕು ಎಂದರು.
ಇದೇ ಸಂದರ್ಭ ಯುವಕ ಮಂಡಳ ಕಟ್ಟಡಕ್ಕೆ ಸಂಸದರ ಅನುದಾನದಿಂದ ರು. 2 ಲಕ್ಷ ನೀಡಿದ್ದು, ತಮ್ಮ ಬೇಡಿಕೆ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ರು. 2 ಲಕ್ಷ ನೀಡುವುದರಿಂದ ಕಟ್ಟಡ ಕಾರ್ಯ ಪೂರ್ಣಗೊಳ್ಳುತ್ತದೆಂದರೆ ಅದನ್ನೂ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪಟ್ಟಣದ ಯುವಶಕ್ತಿ ಸಂಘಟನೆ ಅಭಿವೃದ್ಧಿಗೆ ಪೂರಕವಾಗಿ ಸಮಾಜದ ಸ್ವಾಸ್ತ್ಯ ಹಾಗೂ ಸರ್ವ ಜನಾಂಗದ ಹಿತದೃಷ್ಟಿಯಲ್ಲಿ ಸಮಾಜ ಸೇವೆ ಮಾಡುವ ಸದ್ಗುಣ ನಿಸ್ವಾರ್ಥ ಮನೋಭಾವ ಅಳವಡಿಸಿಕೊಂಡು ಯುವಕ ಮಂಡಳದ ಕಾರ್ಯಕರ್ತರು ತೊಡಬೇಕಾಗಿದೆ ಎಂದು ಕರೆ ನೀಡಿದರು.
ನಮ್ಮ ಪಕ್ಷದ ಯುವ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕಡೆಗೆಣಿಸಿ ಒಗ್ಗಟ್ಟಿನಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಮೋದಿ ಬೆಂಬಲಿಸಲು ಸನ್ನದ್ಧರಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆಂದು ಹೇಳಿದರು.
ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮೀಣ ಘಟಕ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಗಂಜಾಳ, ಉಪಾಧ್ಯಕ್ಷ ಚಂದ್ರಕಾಂತ ವೆರ್ಣೇಕರ, ಜಿಪಂ ಸದಸ್ಯ ಸುರೇಶ ಗಾಣಿಗೇರ ಇದ್ದರು. ಬಸಪ್ಪ ಹಾಳದೋಟರ ಅಧ್ಯಕ್ಷತೆ ವಹಿಸಿದ್ದರು. ಚಂಬಣ್ಣ ಹಾಳದೋಟರ ಸ್ವಾಗತ ಕೋರಿದರು. ಹಸನಸಾಬ ಕೊಡ್ಲಿವಾಡ ನಿರೂಪಿಸಿದರು. ವಿಶ್ವಜ್ಯೋತಿ ಯುವಕ ಮಂಡಳದ ಅಧ್ಯಕ್ಷ ಶಿವಣ್ಣ ಹಾಳದೋಟರ ವಂದಿಸಿದರು.