ಜೂಜಾಟ: 30ಕ್ಕೂ ಹೆಚ್ಚು ಜನರ ಬಂಧನ
ಹುಬ್ಬಳ್ಳಿ: ನಗರದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ 30ಕ್ಕೂ ಹೆಚ್ಚು ಜನರನ್ನು ಮಂಗಳವಾರ ಬಂಧಿಸಿರುವ ಪೊಲೀಸರು, ಬಂಧಿತರಿಂದ ಸಾವಿರಾರು ರು. ನಗದು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಗಿನಜಾವ ಕಲಾದಗಿ ಓಣಿಯಲ್ಲಿ ದೀಪಕ ತುಕಾರಾಮಸಾ ಪೂಜಾರಿ ಹಾಗೂ ಮತ್ತಿತರರು ಇಸ್ಪೀಟ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 12 ಜನರನ್ನು ಬಂಧಿಸಿ, ಇಸ್ಪೀಟ್ ಎಲೆ ಹಾಗೂ 12,580 ನಗದು ವಶಪಡಿಸಿಕೊಂಡಿದ್ದಾರೆ. ಗಬ್ಬೂರ ಬೈಪಾಸ್ ಬಳಿ ಇಸ್ಪೀಟ್ ಆಡುತ್ತಿದ್ದ ಕಮರಿಪೇಟದ ಶಬ್ಬಿರ ರಹಿಮಾನಸಾಬ ಸಯ್ಯದ ಹಾಗೂ ಆತನ ಸಹಚರರನ್ನು ಬಂಧಿಸಿರುವ ಕಸಬಾಪೇಟ ಠಾಣೆ ಪೊಲೀಸರು, ಬಂಧಿತರಿಂದ ರು. 34,255 ಹಣ ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಲ್ಲಿಯ ಕಂಚಗಾರ ಓಣಿಯಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬದಾಮಿ ನಗರದ ಮಲ್ಲೇಶಪ್ಪ ಚನ್ನ್ನಬಸಪ್ಪ ಮುಕ್ಕಲ್ ಸೇರಿದಂತೆ ಐದು ಜನರನ್ನು ಬಂಧಿಸಿರುವ ಘಂಟಿಕೇರಿ ಠಾಣೆ ಪೊಲೀಸರು,9,340 ವಶಪಡಿಸಿಕೊಂಡಿದ್ದಾರೆ. ಕಮರಿಪೇಟ ಓಣಿ ಮುಖ್ಯ ರಸ್ತೆಯ ಜಿಆರ್ ರೆಡ್ಡಿ ರೋಡ್‌ಲೈನ್ಸ್ ಕಚೇರಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ಬೂಸಪೇಟೆಯ ಮಲ್ಲಿಕಾರ್ಜುನ್ ಬಸವಣ್ಣಪ್ಪ ಕೊಣ್ಣೂರ ಹಾಗೂ ಇತರ 11 ಜನರನ್ನು ಬಂಧಿಸಿರುವ ಕಮರಿಪೇಟ ಠಾಣೆ ಪೊಲೀಸರು, ರು. 4,700 ನಗದು ವಶಕ್ಕೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿ: ವೈದ್ಯ ಆತ್ಮಹತ್ಯೆ
ಹುಬ್ಬಳ್ಳಿ:
ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರೊಬ್ಬರು ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಡಾ. ಪ್ರಕಾಶ ಎಸ್. ನಾಯಕ (45) ಎಂಬ ವೈದ್ಯರೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಅಂಕೋಲಾದ ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹುಬ್ಬಳ್ಳಿ ರೇಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.