ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಡಿ. 13ರಿಂದ 15ರ ವರೆಗೆ ಧಾರವಾಡ ಉತ್ಸವ

Lingaraj Badiger
Updated On : 6 Nov 2013, 11:33 am

ಧಾರವಾಡ: ಪ್ರಸಕ್ತ ಸಾಲಿನ ಧಾರವಾಡ ಉತ್ಸವವನ್ನು ಡಿ. 13ರಿಂದ 15ರ ವರೆಗೆ ಏರ್ಪಡಿಸಲು ಜಿಲ್ಲಾ ಉತ್ಸವ ಸಮಿತಿ ನಿರ್ಧರಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಲಾಡ್, ಜಿಲ್ಲೆಯ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಗಳು ಉನ್ನತ ಮಟ್ಟದಲ್ಲಿದ್ದು, ಇಲ್ಲಿ ಏರ್ಪಡಿಸುವ ಜಿಲ್ಲಾ ಉತ್ಸವ ಅರ್ಥಪೂರ್ಣವಾಗಿ ಜರುಗಬೇಕಿದೆ. ಉತ್ಸವಕ್ಕೆ ಸರ್ಕಾರದ ವತಿಯಿಂದ ಅಗತ್ಯ ಸಹಾಯ, ಸಹಕಾರ ನೀಡಲಾಗುವುದು. ಅಧಿಕಾರಿಗಳು ಉತ್ಸವವನ್ನು ವ್ಯವಸ್ಥಿತವಾಗಿ ಯೋಜಿಸಿ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಹು-ಧಾ ತಲಾ 4 ಕಡೆ: ಕಳೆದ ಬಾರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ತಾಲೂಕು ಕೇಂದ್ರಗಳು ಸೇರಿದಂತೆ 21 ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಬಾರಿ ಕಾರ್ಯಕ್ರಮಗಳ ವ್ಯವಸ್ಥಿತ ಸಂಯೋಜನೆಗೆ ಅನುಕೂಲವಾಗುವ ದೃಷ್ಟಿಯಿಂದ ಹುಬ್ಬಳ್ಳಿ ಮತ್ತು ಧಾರವಾಡದ ತಲಾ ನಾಲ್ಕು ಕಡೆಗಳಲ್ಲಿ ಮಾತ್ರ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಜಿಲ್ಲಾ ಉತ್ಸವ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗೆ ಸಮಿತಿಯೊಂದನ್ನು ರಚಿಸಿಕೊಂಡು, ಕಾರ್ಯಕ್ರಮದ ಸ್ಥಳ ನಿಗದಿಗೊಳಿಸುವ ಮತ್ತು ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಖವಾಗುವ ಅಧಿಕಾರ ನೀಡಲಾಯಿತು.
ಧಾರವಾಡ ಉತ್ಸವದಲ್ಲಿ ರಾಜ್ಯದ ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತಿದೆ. ಆದರೂ ಉತ್ಸವಕ್ಕೆ ಇನ್ನೂ ಹೆಚ್ಚಿನ ಮಹತ್ವ ಪ್ರಾಪ್ತವಾಗುವ ದೃಷ್ಟಿಯಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಒಬ್ಬಿಬ್ಬ ಕಲಾವಿದರನ್ನು ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಾಡೋಜ ಪಾಟೀಲ ಪುಟ್ಟಪ್ಪ ಮಾತನಾಡಿ, ಜಿಲ್ಲೆಯ ಮಹಾವಿದ್ಯಾಲಯಗಳು ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಬಲ್ಲವಾದ್ದರಿಂದ ವಿದ್ಯಾರ್ಥಿಗಳಿಗೂ ಅವಕಾಶ ನೀಡುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಸಮೀರ್ ಶುಕ್ಲ ಮಾತನಾಡಿ, ಜಿಲ್ಲಾ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲು ಅನುಕೂಲವಾಗುವಂತೆ 2ನೇ ಶನಿವಾರ ಹಾಗೂ ಭಾನುವಾರ ಸೇರಿಸಿ ದಿನಾಂಕ ನಿಗದಿ ಮಾಡಲಾಗಿದೆ. ಉತ್ಸವ ವ್ಯವಸ್ಥೆಗೆ ಕನಿಷ್ಠ ಒಂದೂವರೆ ತಿಂಗಳು ಕಾಲಾವಕಾಶ ಬೇಕಿದ್ದು, ಈಗ ನಿಗದಿಗೊಳಿಸಿದ ಕಾಲಾವಕಾಶದಲ್ಲಿ ಉತ್ಸವದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಉತ್ಸವದಲ್ಲಿ ಭಾಗವಹಿಸುವ ಕಲಾವಿದರ ಸಂಭಾವಣೆ, ವೇದಿಕೆ ನಿರ್ಮಾಣ, ಆಮಂತ್ರಣ ಮುದ್ರಣ, ಕಲಾವಿದರ ಊಟೋಪಚಾರ ಹಾಗೂ ಗೋಷ್ಠಿಗಳ ಏರ್ಪಾಡು ಸೇರಿದಂತೆ ಉತ್ಸವದ ಒಟ್ಟು ವೆಚ್ಚ ರು. 1 ಕೋಟಿ ಆಗಬಹುದೆಂದು ಅಂದಾಜಿಸಲಾಗಿದೆ. ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿದರಿಗೆ ಸಂಭಾವನೆ ನೀಡಲು ಪ್ರತಿ ತಾಲೂಕಿಗೆ ರು. 1 ಲಕ್ಷ ನೀಡಲಾಗುವುದು. ಉಳಿದ ವೆಚ್ಚವನ್ನು ಆಯಾ ತಾಲೂಕಿನ ಸ್ಥಳೀಯ ಸಂಸ್ಥೆಗಳು ನೋಡಿಕೊಳ್ಳಲಿವೆ ಎಂದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಹಿರಿಯ ಸಾಹಿತಿ ಡಾ. ಗಿರಡ್ಡಿ ಗೋವಿಂದರಾಜ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಸಿ.ಎಸ್. ಶಿವಳ್ಳಿ, ಎನ್.ಎಚ್. ಕೋನರೆಡ್ಡಿ, ಶ್ರೀನಿವಾಸ ಮಾನೆ ಹಾಗೂ ನಾಗರಾಜ ಛಬ್ಬಿ, ಪೊಲೀಸ್ ಆಯುಕ್ತ ಪದ್ಮನಯನ, ಜಿಲ್ಲಾ ಪೊಲೀಸ್ ಅಧೀಕ್ಷಕ ಲೋಕೇಶಕುಮಾರ, ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement