ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಂಗಾಯಣ ನಾಟಕೋತ್ಸವ ಆರಂಭ

Lingaraj Badiger
Updated On : 6 Nov 2013, 11:33 am

ಧಾರವಾಡ: ಜೋಗತಿ, ಗೀಗೀ ಹಾಗೂ ಇನ್ನಿತರೆ ಪ್ರಕಾರದ ಪದಗಳ ಮೂಲಕ ಕುವೆಂಪು ಅವರ, ಸಿ. ಬಸವಲಿಂಗಯ್ಯ ನಿರ್ದೇಶಿಸಿದ ಶೂದ್ರ ತಪಸ್ವಿ ನಾಟಕ ಮಂಗಳವಾರ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಮೈಸೂರಿನ ರಂಗಾಯಣ ವತಿಯಿಂದ ಹಮ್ಮಿಕೊಂಡಿರುವ ನಾಲ್ಕು ದಿನಗಳ ನಾಟಕೋತ್ಸವದ ಮೊದಲ ನಾಟಕ ಶೂದ್ರ ತಪಸ್ವಿ. ಬಹಳ ದಿನಗಳ ನಂತರ ಧಾರವಾಡದಲ್ಲಿ ರಂಗ ಪ್ರವೇಶ ಮಾಡಿದ ಮೈಸೂರು ರಂಗಾಯಣ ಕಲಾವಿದರು ತಮ್ಮ ಅದ್ಭುತ ನಟನೆ, ಅರ್ಥಗರ್ಭಿತ ಜಾನಪದ ಹಾಡುಗಳ ಮೂಲಕ ಈ ನಾಟಕ ಪ್ರದರ್ಶಿಸಿದರು.
ರಾಮಾಯಣದಲ್ಲಿ ಶೂದ್ರನಾದ ಶಂಬೂಕ ತಪಸ್ಸು ಮಾಡಿದ ಪ್ರಸಂಗ ಈ ನಾಟಕದ ಕಥಾವಸ್ತು. ಉಚ್ಛ-ನೀಚ ಕುಲಗಳ ಅಂದಿನ ಜಾತಿ ವ್ಯವಸ್ಥೆಯನ್ನು ಕುವೆಂಪು ಅವರು ಹೊಸ ದೃಷ್ಟಿಕೋನದಿಂದ ಕಂಡ ಬಗೆ ನಾಟಕದಲ್ಲಿ ನಿರೂಪಿತವಾಗಿದೆ.
ಇದಕ್ಕೂ ಮುಂಚೆ ನಡೆದ ನಾಟಕೋತ್ಸವದ ಉದ್ಘಾಟನೆಯಲ್ಲಿ ರಂಗ ಸಮಾಜದ ಸದಸ್ಯ ಡಿ.ಎಸ್. ಚೌಗಲೆ, ರಂಗಾಯಣದ ಹಿತದೃಷ್ಟಿಯಿಂದ ಸದ್ಯದಲ್ಲಿಯೇ ಜಾತಿ, ಪ್ರದೇಶ ಮೀರಿ ಧಾರವಾಡ ಹಾಗೂ ಶಿವಮೊಗ್ಗ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದರು. ಉದ್ಘಾಟನೆ ನೇರವೇರಿಸಿದ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಕಲಾವಿದರು ಬರೀ ಕಲೆಯಲ್ಲಿಯೇ ತೊಡಗಿಕೊಳ್ಳಬೇಕೇ ಹೊರತು, ಆಡಳಿತ ಹಾಗೂ ರಾಜಕೀಯದತ್ತ ಮನಸ್ಸು ಮಾಡಬಾರದು. ಒಂದು ವೇಳೆ ಮಾಡಿದರೆ ಅವರ ಕಲೆ ಸೊರಗಿ ಹೋಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ರಂಗಾಯಣದ ನಿರ್ದೇಶಕ ಎಚ್. ಜನಾರ್ದನ, ಅಹಂಕಾರ ಕಳಚದವ ಎಂದಿಗೂ ಕಲಾವಿದ ಆಗುವುದಿಲ್ಲ. ತನ್ನ ನಟನೆಯಲ್ಲಿ ಆತ ಪೂರ್ಣತೆ ಪಡೆದಾಗಲೇ ಕಲಾವಿದ ಎನಿಸಿಕೊಳ್ಳುತ್ತಾನೆ ಎಂದರು.
ರಂಗಾಯಣದ ಉಪ ನಿರ್ದೇಶಕ ಎಸ್.ಐ. ಬಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ ಸ್ವಾಗತಿಸಿದರು. ಹಿರಿಯ ಸಾಹಿತಿ ಡಾ. ಗಿರಡ್ಡಿ ಗೋವಿಂದರಾಜ ಇದ್ದರು.

ಇಂದು ಚಿರೇಬಂದಿವಾಡೆ
ನಾಟಕೋತ್ಸವದ ಅಂಗವಾಗಿ ಬುಧವಾರ ಸಂಜೆ 6.30ಕ್ಕೆ ಸೃಜನಾದಲ್ಲಿ ಪ್ರದರ್ಶನಗೊಳ್ಳಲಿರುವ ಕನ್ನಡಕ್ಕೆ ಅನುವಾದಗೊಂಡಿರುವ ಮರಾಠಿ ಮೂಲದ ನಾಟಕ, ಚಿರೇಬಂದಿವಾಡೆ (ನಿರ್ದೇಶನ ಪ್ರಮೀಳಾ ಬೇಂದ್ರೆ) ಮಹಾರಾಷ್ಟ್ರದಲ್ಲಿನ ವಾಡೆವೊಂದರ ಕುಟುಂಬದ ಬದುಕಿನ ಸುತ್ತ ಹೆಣೆಯಲಾಗಿದೆ. ಆಧುನಿಕ ಬದುಕು ಹಲವು ಒತ್ತಡಗಳಿಗೆ ಸಿಲುಕಿ ಘಾಸಿಗೊಳ್ಳುವ ಮತ್ತು ನಗರ ಹಾಗೂ ಹಳ್ಳಿಗಳ ಬದುಕಿನ ಆಕರ್ಷಣೆ ಹಾಗೂ ನೋವುಗಳನ್ನು ನಿರೂಪಿಸುವಂಥದ್ದು. ಮರಾಠಿ ಮೂಲ ನಾಟಕವನ್ನು ಮಾರುತಿ ಶಾನಭಾಗ್ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement