ಹೆಚ್ಚಾದ ಮಾಂಸದಂಗಡಿ: ಹೆಚ್ಚಿದ ಕಿರಿಕಿರಿ
ಹುಬ್ಬಳ್ಳಿ: ಅನಧಿಕೃತವಾಗಿ ಎಲ್ಲೆಂದರಲ್ಲಿ ಮಾಂಸ ಮಾರಾಟದ ದಂಧೆ ಅವಳಿ ನಗರದಲ್ಲಿ ಹೆಚ್ಚುತ್ತಿದೆ.
ಜನವಸತಿ ಪ್ರದೇಶದಲ್ಲಿಯೇ ಚಿಕನ್, ಮಟನ್, ಮೀನುಗಳನ್ನು ಮಾರಾಟ ಮಾಡುವ ಕೆಲ ವ್ಯಾಪಾರಿಗಳಿಂದಾಗಿ ಇಡಿ ಬಡಾವಣೆಯ ವಾತಾವರಣವೇ ಹದಗೆಡುವಂತಾಗಿದೆ. ಮಹಾನಗರ ಪಾಲಿಕೆಯಿಂದ ಲೈಸೆನ್ಸ್ ಪಡೆಯದೇ, ಮಾಂಸ ಮಾರಾಟಕ್ಕಿ ಇರುವ ಕನಿಷ್ಠ ನಿಯಮಗಳನ್ನೂ ಪಾಲಿಸದೇ ಎಗ್ಗಿಲ್ಲದೇ ನಡೆಯುತ್ತಿರುವ ಈ ಅವ್ಯವಹಾರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.
ಅನಧಿಕೃತ ಚಿಕನ್, ಮಟನ್, ಮೀನು ಮಾರಾಟ ಮಾಡುವ ಸಂಗತಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಗೊತ್ತಿಲ್ಲವೆಂದೇನೂ ಇಲ್ಲ. ಆದರೆ ಅಧಿಕಾರಿಗಳದ್ದು ಜಾಣ ಕುರುಡತನ ಹಾಗೂ ಮೌನ. ಈ ಅನಧಿಕೃತ ಅವ್ಯವಹಾರದಿಂದಾಗಿ ಪಾಲಿಕೆ ಅಧಿಕಾರಿಗಳ ಜೇಬೂ ತುಂಬುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲ.
ಹುಬ್ಬಳ್ಳಿಯ ಕಮರಿಪೇಟೆ, ದುರ್ಗದಬೈಲ್, ಬಂಡಿವಾಡ ಅಗಸಿ, ಧಾರವಾಡದ ಸುಭಾಷ ರಸ್ತೆ, ಸವದತ್ತಿ ರಸ್ತೆ, ಜಕಣಿಬಾವಿ ಸಮೀಪ, ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಅನಧಿಕೃತ ಮಾಂಸ ಮಾರಾಟದ ದಂಧೆ ಹಾಡುಹಗಲೇ ಮುಂದುವರೆದಿದೆ.
ಪಾಲಿಕೆಗೆ ಯಾವುದೇ ಕರ ನೀಡದೆ, ಲೈಸೆನ್ಸ್ನ್ನೂ ಪಡೆಯದೆ, ಕನಿಷ್ಠ ನಿಯಮಗಳನ್ನೂ ಪಾಲಿಸದೇ ನಡೆಯುತ್ತಿರುವ ಈ ಅವ್ಯವಹಾರ ಜನಸಾಮಾನ್ಯರ ನೆಮ್ಮದಿ ಹಾಳು ಮಾಡಿದೆ.
ಮಾಂಸದ ರುಚಿಗೆ ಹೆಚ್ಚಿದ ಬೀದಿನಾಯಿಗಳು: ಈ ಅವ್ಯವಹಾರ ಮಾಡುತ್ತಿರುವವರು ಮಾಂಸದ ತುಂಡುಗಳನ್ನು ರಸ್ತೆ ಪಕ್ಕ ಹಾಗೂ ಸಮೀಪದ ಚರಂಡಿಗಳಿಗೆ ಹಾಕುವುದರಿಂದ ಬೀದಿ ನಾಯಿ ಹಾಗೂ ಮತ್ತಿತರ ವಿಷ ಜಂತುಗಳ ಭೀತಿ ಹೆಚ್ಚಾಗಿದೆ. ಮಾಂಸದ ರುಚಿ ಕಂಡ ಬೀದಿ ನಾಯಿಗಳು ಯಾವುದೇ ಸಮಯದಲ್ಲಿ ಚಿಕ್ಕ ಮಕ್ಕಳ ಮೇಲೆ ದಾಳಿ ನಡೆಸುವ ಆತಂಕ ನಾಗರಿಕರನ್ನು ಕಾಡುತ್ತಿದೆ.
ಚಿಕನ್, ಮಟನ್, ಮೀನು ಮಾರಾಟ ಮಾಡಲು ಪಾಲಿಕೆಯಿಂದ ಲೈಸೆನ್ಸ್ ಪಡೆದ ವ್ಯಾಪಾರಸ್ಥರು ನಿಯಮಬದ್ಧವಾಗಿಯೇ ವ್ಯಾಪಾರ ನಡೆಸುತ್ತಿದ್ದಾರೆ. ತಾವು ಪಡೆದಿರುವ ಲೈಸೆನ್ಸ್ನ ಪ್ರತಿಯನ್ನು ಅಂಗಡಿಗಳಲ್ಲಿ ತೂಗು ಹಾಕಿ, ಮಾಂಸ ಮಾರಾಟಕ್ಕಿ ಇರುವ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಆದರೆ, ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿರುವವರು ಮಾತ್ರ ತಮಗೆ ಹೇಳುವವರು-ಕೇಳುವವರು ಯಾರೂ ಇಲ್ಲವೆಂಬಂತೆ ವ್ಯಾಪಾರಕ್ಕಿಳಿದಿದ್ದಾರೆ. ಜನವಸತಿ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡದಂತೆ ಈ ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಳ್ಳಲು ಹೋಗಿರುವ ಕೆಲ ವ್ಯಕ್ತಿಗಳು ಬೆದರಿಕೆ ಎದುರಿಸಿರುವ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಕೆಲವರು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನ ಮಾತ್ರ ಶೂನ್ಯ.
ಇನ್ನಾದರೂ ಪಾಲಿಕೆ ಅಧಿಕಾರಿಗಳು ಈ ಅನಧಿಕೃತ ಮಾಂಸ ಮಾರಾಟ ದಂಧೆಗೆ ಮುಕ್ತಿ ಹಾಡುವ ಮೂಲಕ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ಸಾಗಿಸಲು ಸೂಕ್ತ ಕ್ರಮ ಕೈಗೊಳ್ಳುವರೇ?