ಚಿರವಾಗಿ ಉಳಿಯುವ ಚಿರೇಬಂದಿ ವಾಡೆ
ಧಾರವಾಡ: ಬ್ರಾಹ್ಮಣ ಕುಟುಂಬವೊಂದರ ಮನೆಯ ಹಿರಿಯನ ಸಾವಿನ ಸುದ್ದಿಯೊಂದಿಗೆ ನಾಟಕ ಶುರುವಾಗುತ್ತದೆ. ಈ ಸಾವಿನ ದಿನಕರ್ಮ ಕ್ರಿಯಾವಿಧಿಗಳ ಐದು ದಿನಗಳ ಸಮಯ ಮಾತ್ರ ನಾಟಕದ ಕಾಲ. ಈ ಐದು ದಿನಗಳಲ್ಲಿಯೇ ಆ ಕುಟುಂಬದ ಸೂಕ್ಷ್ಮ ಸಂಬಂಧಗಳು, ಒಳ ಬಿಗಿಗಳು ಪ್ರೇಕ್ಷಕರಿಗೆ ಅರಿವಾಗುತ್ತವೆ. ಅದೇ ಚಿರೇಬಂದಿ ವಾಡೆ ನಾಟಕ.
ಮೈಸೂರು ರಂಗಾಯಣ ವತಿಯಿಂದ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ನಾಟಕೋತ್ಸವದ 2ನೇ ದಿನವಾದ ಬುಧವಾರ ಸುದೀರ್ಘ ಎರಡೂವರೆ ಗಂಟೆಗಳ ಕಾಲ ನಡೆದ ಮಹೇಶ್ ಎಲಕುಂಚವಾರ್ ಅವರ ಮೂಲ ಮರಾಠಿ ನಾಟಕವನ್ನು ಮಾರುತಿ ಶಾನಭಾಗ ಅವರು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಮೀಳಾ ಬೇಂಗ್ರೆ ನಿರ್ದೇಶಿಸಿದ್ದು, ನಾಟಕ ಪೂರ್ತಿ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದು ನಿಜ.
ದೇಶಪಾಂಡೆ ಮನೆತನದ ದೊಡ್ಡ ವಾಡೆಯ ಸುತ್ತಲೂ ಈ ನಾಟಕ ಗಿರಕಿ ಹೊಡೆಯುತ್ತದೆ. ಮನೆಯ ಹಿರಿಯ ವೆಂಕಟೇಶ್ (ತಾತ್ಯಾ- ಒಮ್ಮೆಯೂ ರಂಗದ ಮೇಲೆ ಕಾಣಿಸಿಕೊಳ್ಳದಿದ್ದರೂ ಪೂರ್ತಿ ನಾಟಕ ಈ ವ್ಯಕ್ತಿಯ ಹೆಸರಿನಲ್ಲಿಯೇ ನಡೆಯುತ್ತದೆ). ಈತನ ಪತ್ನಿ ನಾಟಕವನ್ನು ನಿರ್ದೇಶಿಸಿದ ಪ್ರಮೀಳಾ ಬೇಂಗ್ರೆ ಅದ್ಭುತವಾಗಿ ನಟನೆ ನಿಭಾಯಿಸಿದ್ದಾರೆ. ತನ್ನ ಗಂಡನ ಕ್ರಿಯಾವಿಧಿ ಮುಗಿಸಲು ತನ್ನ ಹೆಸರಿನ ಆಸ್ತಿ ಮಾರಲು ಅನಿವಾರ್ಯವಾಗಿ ಅಣಿಯಾಗುತ್ತಾಳೆ ಆಕೆ.
ಪಾತ್ರಗಳು ಅದ್ಭುತ: ಇಡೀ ಹಳ್ಳಿಗೆ ದೇಶಪಾಂಡೆ ಮನೆತನ ದೊಡ್ಡ ಮನೆತನ. ತೀರಿ ಹೋದ ವೆಂಕಟನೇಶನಿಗೆ ಮೂರು ಜನ ಗಂಡು ಹಾಗೂ ಓರ್ವ ಹೆಣ್ಣು ಮಕ್ಕಳು. ಅದರಲ್ಲಿ ಭಾಸ್ಕರ್ (ಪ್ರಶಾಂತ್ ಹಿರೇಮಠ) ಹಾಗೂ ಕೊನೆಯವ ಚಂದೂ (ನೂರ್ಅಹ್ಮದ್) ಊರಲ್ಲಿಯೇ ಇದ್ದು ಹೊಲ- ಮನೆ ನೋಡಿಕೊಳ್ಳುತ್ತಿರುತ್ತಾರೆ. ಇನ್ನು ಸುಧೀರ್ (ಹುಲಿಗೆಪ್ಪ ಕಟ್ಟಿಮನಿ) ಮುಂಬೈನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಪ್ರಭಾ (ಶಶಿಕಲಾ) ಕಲಿಯಲಿಲ್ಲ ಎಂದು ಮದುವೆಯೂ ಆಗದೇ ಮನೆಯಲ್ಲಿಯೇ ಇರುತ್ತಾಳೆ.
ಇನ್ನೂ ಅಜ್ಜಿಯ (ನಂದಿನಿ ಕೆ.ಆರ್.) ಪಾತ್ರ ತುಂಬ ವಿಶಿಷ್ಟ. ಕಿವಿ ಹಾಗೂ ಕಣ್ಣು ಕಾಣದ ಮುದಿ ಜೀವ. ತನ್ನ ಮಗ ವೆಂಕಟೇಶ್ ತೀರಿ ಹೋಗಿದ್ದೂ ಇವಳಿಗೆ ಗೊತ್ತಿರದಷ್ಟು ಹಣ್ಣು ಮುದುಕಿ. ಬರೋಬ್ಬರಿ ಹದಿನೈದು ನಿಮಿಷಕ್ಕೆ ವೆಂಕಟೇಶಾ ಎಷ್ಟು ಹೊಡಿತೂ ಎಂದು ವ್ಯಾಳ್ಯೆ ಕೇಳ್ತಾ ಇರ್ತಾಳೆ. ನಾಟಕದ ಪ್ರತಿ ಪಾತ್ರವೂ ನಮ್ಮ ಸುತ್ತಮುತ್ತಲಿನ ಸಾಮಾನ್ಯ ಕುಟುಂಬವೊಂದರ ಮನೆಗಳಲ್ಲಿನ ಬದುಕಿನ ಸ್ಥಿತಿಗಳ, ನಾವೆಲ್ಲಾ ಕಳೆದುಕೊಳ್ಳುತ್ತಿರುವ ಹಿರಿಯರು ಬದುಕಿದ ಘನತೆಯ ಜೀವನವನ್ನು ಎತ್ತಿ ತೋರಿವೆ. ಹಾಳು ಬೀಳುತ್ತಿರುವ ವಾಡೆ ಸುಧಾರಣೆಗೂ ಬಲಹೀನ ವ್ಯವಸ್ಥೆ ಆ ಮನೆಯಲ್ಲಿದೆ. ತಂದೆ ತೀರಿದಾಗಲೂ ಅವರ ಕ್ರಿಯಾವಿಧಿ ಮುಗಿಸಲು ಮಕ್ಕಳು ಒದ್ದಾಡುವ ಸ್ಥಿತಿಯು ನಿಜ ಬದುಕಿನ ಮೌಲ್ಯವನ್ನು ಹಿಡಿದಿಡುತ್ತದೆ. ಹತ್ತಾರು ವರ್ಷಗಳ ಅನುಭವ ಹೊಂದಿರುವ ನಟರು ನಾಟಕಕ್ಕೆ ಭೂಷಣರಾಗಿದ್ದಾರೆ. ಉಳಿದಂತೆ ಬೆಳಕು, ಪ್ರಸಾದನ, ರಂಗಸಜ್ಜಿಕೆ ಎಲ್ಲವೂ ಅತ್ಯುತ್ತಮ.