ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಆರ್‌ಟಿಎಸ್: ಶೀಘ್ರ ಕಾರ್ಯಾದೇಶ

Vishwanath S
Updated On : 7 Nov 2013, 11:17 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 6
ಹುಬ್ಬಳ್ಳಿ-ಧಾರವಾಡ ನಡುವಿನ ನಿಯೋಜಿತ ಬಿಆರ್‌ಟಿಎಸ್ ಯೋಜನೆಗೆ ಬರುವ ತಿಂಗಳಲ್ಲಿ ಕಾಮಗಾರಿ ಆದೇಶ ನೀಡಲಾಗುವುದು ಎಂದು ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ. ಮಂಜುಳಾ ತಿಳಿಸಿದರು.
ನಗರದಲ್ಲಿ ಬುಧವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ತಾಂತ್ರಿಕ ಹಾಗೂ ಹಣಕಾಸು ಇಲಾಖೆಯಿಂದ ಅನುಮೋದನೆ ಲಭಿಸಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ತನ್ಮೂಲಕ ಹುಬ್ಬಳ್ಳಿ, ಧಾರವಾಡ ಘಟಕ ನಿರ್ಮಾಣಕ್ಕೆ ಹಾಗೂ ಹುಬ್ಬಳ್ಳಿಯಲ್ಲಿ ವಿಭಾಗೀಯ ಕಾರ್ಯಾಗಾರ ಘಟಕ ನಿರ್ಮಿಸಲಾಗುವುದು. ಈ ಯೋಜನೆಗೆ ವರ್ಲ್ಡ್ ಬ್ಯಾಂಕ್‌ನಿಂದ ಎನ್‌ಒಸಿ ಸಿಕ್ಕ ಬಳಿಕ ಕಾಮಗಾರಿಯ ಆದೇಶ ನೀಡಲಾಗುವುದು ಎಂದರು.
ಇನ್ನುಳಿದ ಅಭಿವೃದ್ಧಿ ಕಾಮಗಾರಿಗಳಾದ ಧಾರವಾಡದಲ್ಲಿ ಹಳೆ ಬಸ್ ಟರ್ಮಿನಲ್ ಹಾಗೂ ಹುಬ್ಬಳ್ಳಿಯಲ್ಲಿ ವಿಭಾಗೀಯ ಟರ್ಮಿನಲ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯ ಹಂತದಲ್ಲಿದ್ದು, ಈ ಕಾಮಗಾರಿಗಳಿಗೆ ಬರುವ ಜನೇವರಿ ತಿಂಗಳಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದ ಮಂಜುಳಾ, ಯೋಜನೆಯ ಎಲ್ಲ ನೀಲನಕ್ಷೆ ಸಿದ್ಧವಾಗಿದೆ ಎಂದು ತಿಳಿಸಿದರು.
70 ಎಕರೆ ಭೂಮಿಯ ಅವಶ್ಯಕತೆ: ಬಿಆರ್‌ಟಿಎಸ್ ಯೋಜನೆಯ ನೀಲ ನಕ್ಷೆ ಪ್ರಕಾರ ಈಗಿನ ರಸ್ತೆ ವಿಸ್ತರಣೆಗೆ ಹೆಚ್ಚುವರಿಯಾಗಿ 70 ಎಕರೆ ಭೂಮಿಯ ಅವಶ್ಯಕತೆ ಇದೆ. ಇದರಲ್ಲಿ 20 ಎಕರೆ ಸರ್ಕಾರಿ ಜಾಗದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಇನ್ನುಳಿದ ಭೂಮಿ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಪ್ರಾಧಿಕಾರದಿಂದ ಹಸ್ತಾಂತರಗೊಳ್ಳಬೇಕಿದೆ ಎಂದರು.
ಈಗಾಗಲೇ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ಭೂಮಿ ವಶಪಡಿಸಿಕೊಳ್ಳುವ ಸಮಸ್ಯೆಯಿಂದಾಗಿ ಕೆಲವೆಡೆ ಕಾಮಗಾರಿ ಸ್ಥಗಿತಗೊಂಡಿದೆ. ನೂರಮ್ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ಗೆ ರು. 107 ಕೋಟಿ ವಿಶೇಷ ಅನುದಾನ ಲಭಿಸಿದೆ. ಈ ಅನುದಾನದಡಿ 150 ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ, ಬಸವರಾಜ ಹೊರಟ್ಟಿ, ನಾಗರಾಜ ಛಬ್ಬಿ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement