ವಸತಿ ಹಣ: ಫಲಾನುಭವಿಗಳಿಂದ ತಾಪಂ ಕಚೇರಿಗೆ ಮುತ್ತಿಗೆ
ಕುಂದಗೋಳ: ತಾಲೂಕಿನ ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ 2010-11ನೇ ಸಾಲಿನ ಬಸವ ವಸತಿ ಯೋಜನೆಯಡಿ ಮಂಜೂರಾದ ಫಲಾನುಭವಿಗಳಿಗೆ ಹಣ ವಿತರಿಸುವಂತೆ ಆಗ್ರಹಿಸಿ ಫಲಾನುಭವಿಗಳೊಂದಿಗೆ ಕರವೇ ಕಾರ್ಯಕರ್ತರು ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತರ್ಲಘಟ್ಟ ಗ್ರಾಮ ಪಂಚಾಯತಿಯಡಿ ಒಟ್ಟು 62 ಫಲಾನುಭವಿಗಳು ಸರ್ಕಾರದ ಬಸವ ವಸತಿ ಯೋಜನೆಗೆ ಆಯ್ಕೆಯಾಗಿದ್ದು, ಆದರೆ, ಗ್ರಾಮದ ಐವರು ಫಲಾನುಭವಿಗಳು ತಡೆಯಾಜ್ಞೆ ನೀಡಲು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದು, ಆದರೆ, ಇದೀಗ ಅದು ಇತ್ಯರ್ಥಗೊಂಡಿದ್ದರೂ ಕೆಲ ಪ್ರಭಾವಿ ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಈ ಫಲಾನುಭವಿಗಳು ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದರೂ ಸರ್ಕಾರದ ಸಹಾಯಧನ ಬಿಡುಗಡೆಗೊಳ್ಳುತ್ತಿಲ್ಲ. ಇದರಿಂದ ಫಲಾನುಭವಿಗಳು ಸಾಲ-ಸೂಲ ಮಾಡಿ ಮನೆಕಟ್ಟಿಕೊಂಡು ಈಗ ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಈ ಕುರಿತು ಏಳು ದಿನಗಳ ಒಳಗಾಗಿ ಸಂಬಂಧಿಸಿದ ಅಧಿಕಾರಿಗಳು ಇತ್ಯರ್ಥ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ ಒತ್ತಾಯಪಡಿಸಿ ತಾಪಂ ಮ್ಯಾನೇಜರ್ ಅಶೋಕ ತೇರಣಿ ಅವರಿಗೆ ಮನವಿ ಸಲ್ಲಿಸಿದರು.
ಫಲಾನುಭವಿಗಳಾದ ಸೋಮನಗೌಡ ತೆಂಬದಮನಿ, ಸಂತೋಷ ಇಟಗಿ, ಮಂಜು ನಂದೆಪ್ಪನವರ, ಈರಪ್ಪ ಜಣಗಿ, ಬಸಪ್ಪ ಅಂಗಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.