ಇಂದಿನಿಂದ ಶಾಂತಿಗಾಗಿ ಸಾಹಿತ್ಯ ಕಾರ್ಯಕ್ರಮ
ಧಾರವಾಡ: ಶಾಂತಿ ಪ್ರಕಾಶನದ ರಜತಮಹೋತ್ಸವ ಅಂಗವಾಗಿ ನ. 8ರಿಂದ ನಗರದಲ್ಲಿ ಪುಸ್ತಕ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಅಬ್ದುಲ್ ಖಾದರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1988ರಲ್ಲಿ ಆರಂಭವಾದ ಶಾಂತಿ ಪ್ರಕಾಶನದ ರಜಮಹೋತ್ಸವದ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನವೆಂಬರ ತಿಂಗಳಲ್ಲಿ ಶಾಂತಿಗಾಗಿ ಸಾಹಿತ್ಯ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದುವರೆಗೂ 250ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಾಶಿಸಿರುವ ಸಂಸ್ಥೆ, ಕುರಾನ್ ವ್ಯಾಖ್ಯಾನ, ಭಾವಾನುವಾದ, ಪ್ರವಾದಿ ಜೀವನ, ಸಂದೇಶ, ಪ್ರವಾದಿ ವಚನಗಳ ಸಂಗ್ರಹ, ಕೌಟುಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ರಂಗಗಳಿಗೆ ಸಂಬಂಧಿಸಿದ ಕೃತಿಗಳು ಕನ್ನಡ ಸಾಹಿತ್ಯ ಲೋಕದ ಪ್ರಶಂಸೆಗೆ ಪಾತ್ರವಾಗಿವೆ ಎಂದರು.
ನಗರದ ಕಲಾಭವನದ ಮೈದಾನದಲ್ಲಿ ನ. 8 ರಿಂದ 14ವರೆಗೆ ನಡೆಯುವ ಪುಸ್ತಕ ಪ್ರದರ್ಶನವನ್ನು ನಿವೃತ್ತ ಪ್ರಾಧ್ಯಾಪಕ ಡಾ. ಪಂಚಾಕ್ಷರಿ ಹಿರೇಮಠ ಉದ್ಘಾಟಿಸುವರು. ಮನಸೂರು ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು, ಶಾಸಕ ವಿನಯ ಕುಲಕರ್ಣಿ, ಕವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಕೆ.ಆರ್. ದುರ್ಗಾದಾಸ, ಸಾಹಿತಿ ಮಹ್ಮದಅಲಿ ಗೂಡುಬಾಯಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಇಳಕಲ್ ಜಮಾತೆ ಇಸ್ಲಾಂನ ತಾಜುದ್ದೀನ ಇಳಕಲ್ ವಹಿಸುವರು. ಜೊತೆಗೆ ಮಹಿಳಾ ಮತ್ತು ಮಕ್ಕಳ ಸಮ್ಮೇಳನ, ವಿಚಾರಗೋಷ್ಠಿ, ಸಂವಾದ, ಸಾಹಿತಿಗಳೊಂದಿಗೆ ಚರ್ಚೆ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮುಸ್ತಾಕಅಹ್ಮದ ಹಾವೇರಿಪೇಟ, ಸಲೀಂ ಉಮರಿ, ಇಜಾಜಅಹ್ಮದ್ ಶಿರಹಟ್ಟಿ ಇದ್ದರು.