ಬೆಂಬೆಲೆಗಾಗಿ ಬೆಂಗಳೂರು ಚಲೋ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 7
ಈರುಳ್ಳಿ, ಗೋವಿನಜೋಳ, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿ ರಾಜ್ಯ ಪಕ್ಷಾತೀತ ರೈತ ಹಿತರಕ್ಷಣಾ ಸಮಿತಿ ಇಷ್ಟರಲ್ಲಿಯೇ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಿದೆ.
ಗುರುವಾರ ಎಪಿಎಂಸಿ ಆವರಣದಲ್ಲಿ ಸಮಿತಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿತು. ಇದೀಗ ಸರ್ಕಾರ ನಿರ್ಧರಿಸಿರುವ ಬೆಂಬಲ ಬೆಲೆ ತೀರಾ ಕಡಿಮೆಯಾಗಿದ್ದು, ಇದರಿಂದ ಬೆಳೆ ಬೆಳೆಯಲು ಮಾಡಿದ ಖರ್ಚು ಸಹ ಗಿಟ್ಟುವುದಿಲ್ಲ ಎಂದು ಸಭೆಯಲ್ಲಿ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿ.ಎಂ. ಹನಸಿ ಮಾತನಾಡಿ, ಈರುಳ್ಳಿ ಖರೀದಿ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆಯುತ್ತಿದೆ. ಮನಸ್ಸಿಗೆ ಬಂದಂತೆ ದರ ನಿಗದಿ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಪ್ಪಿಸಲು ಈರುಳ್ಳಿಯನ್ನು ಮೂರು ವರ್ಗಗಳಾಗಿ ವರ್ಗೀಕರಿಸಿ ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿ ಮಾಡಬೇಕು. ಪ್ರಸ್ತುತ ವರ್ಷ ಈರುಳ್ಳಿಯನ್ನು ಕ್ರಮವಾಗಿ ರು. 4, 3 ಹಾಗೂ 1,500 ದರದಲ್ಲಿ ಖರೀದಿ ಮಾಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಸಭೆಯಲ್ಲಿ ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಯಿತು. ಈ ವರ್ಷ ಗೋವಿನ ಜೋಳಕ್ಕೆ ಸರ್ಕಾರ ಕ್ವಿಂಟಲ್ಗೆ ರು. 1310 ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಈ ದರ ತೀರಾ ಕಡಿಮೆಯಾಗಿದ್ದು ಇದನ್ನು ರು. 1800ಗೆ ಪರಿಷ್ಕರಿಸಬೇಕು. ಇದೇ ವೇಳೆ ಸರ್ಕಾರ ಜವಾರಿ ಹತ್ತಿ ಕ್ವಿಂಟಾಲ್ವೊಂದಕ್ಕೆ ರು. 3700, ಬಿಟಿ ಹತ್ತಿಗೆ ರು. 4 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿದ್ದು, ಈ ಬೆಲೆಯನ್ನು ಕ್ರಮವಾಗಿ 6 ಹಾಗೂ 8 ಸಾವಿರಕ್ಕೆ ಹೆಚ್ಚಿಸಬೇಕೆಂದು ನಿರ್ಣಯಿಸಲಾಯಿತು. ಇದೇ ರೀತಿ ಭತ್ತ, ಜೋಳ, ಗೋದಿ ಸೇರಿದಂತೆ ಇನ್ನಿತರ ಬೆಳೆಗಳಿಗೂ ಸರ್ಕಾರ ಕಡಿಮೆ ಬೆಂಬಲ ಘೋಷಿಸಿದ್ದು, ಇವಕ್ಕೆ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಶಂಕರಪ್ಪ ಅವರಾದಿ, ವಿ.ಬಿ. ಮಾಗನೂರ, ಶೇಖಪ್ಪ ಬಳಿಗಾರ, ಎಚ್.ಕೆ. ನಾಗರಹಳ್ಳಿ, ಉಳವಪ್ಪ ಬಳಿಗೇರ, ಜಿ.ಎಸ್. ಮಾದಾಪೂರ, ವಿರೂಪಾಕ್ಷಪ್ಪ ಲಟ್ಟಿ, ಸುರೇಶ ದಾಸನೂರ, ಶಂಕರಗೌಡ ಪಾಟೀಲ, ಮಂಜು ಮುದರಡ್ಡಿ ಮತ್ತಿತರರಿದ್ದರು.
ಈರುಳ್ಳಿ ಖರೀದಿ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆಯುತ್ತಿದೆ. ಮನಸ್ಸಿಗೆ ಬಂದಂತೆ ದರ ನಿಗದಿ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಪ್ಪಿಸಲು ಈರುಳ್ಳಿಯನ್ನು ಮೂರು ವರ್ಗಗಳಾಗಿ ವರ್ಗೀಕರಿಸಿ ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿ ಮಾಡಬೇಕು. ಪ್ರಸ್ತುತ ವರ್ಷ ಈರುಳ್ಳಿಯನ್ನು ಕ್ರಮವಾಗಿ ರು. 4, 3 ಹಾಗೂ 1,500 ದರದಲ್ಲಿ ಖರೀದಿ ಮಾಡಬೇಕು.
- ಬಿ.ಎಂ. ಹನಸಿ