ವಿವಿಧ ಬೇಡಿಕೆ ಈಡೇರಿಸಲು ಆಗ್ರಹ
ಕುಂದಗೋಳ: ಗೊರವಪ್ಪ, ಗೊರವಮ್ಮ, ಜೋಗಮ್ಮಗಳು ದೇವರಲ್ಲಿ ನಂಬಿಕೆ ಇಟ್ಟು ಜತೆಗೆ ಭಿಕ್ಷೆ ಮಾಡುವ ಪದ್ಧತಿ ಹೊಂದಿದ್ದು, ಈಗ ಇವರನ್ನೆಲ್ಲ ಸರ್ಕಾರ ಬಂಧಿಸುವ ಬದಲು ಸೂಕ್ತ ಸೌಲಭ್ಯ ನೀಡುವಂತೆ ಆಗ್ರಹಿಸಿ ಗೊರವಪ್ಪ, ಗೊರವಮ್ಮ ಹಾಗೂ ಜೋಗಮ್ಮ ಅವರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಗಾಳಿ ಮರೆಮ್ಮ ದೇವಿ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಚ್.ಎಂ. ಓಲೇಕಾರಗೆ ಮನವಿ ಸಲ್ಲಿಸಿದರು.
ಧಾರ್ಮಿಕ ಪದ್ಧತಿ ಆಚರಿಸುತ್ತಿರುವ ತಮ್ಮನ್ನು ಗುರುತಿಸಿ ಸೂಕ್ತ ಸೌಲಭ್ಯ ಒದಗಿಸಬೇಕು. ಅದಕ್ಕಾಗಿ ಅಧಿಕಾರಿ ನಿಯೋಜಿಸಬೇಕು. ಜೀವನೋಪಾಯಕ್ಕಾಗಿ ಭಿಕ್ಷಾಟನೆ ಕೈಗೊಂಡಿರುವ ತಮಗೆ ಮಾಸಿಕ ವೇತನ ನೀಡಬೇಕು. ವಾಸಿಸಲು ಮನೆಗಳನ್ನು ನೀಡಿ ಅದರ ಹಕ್ಕುಪತ್ರಗಳನ್ನು ಒದಗಿಸಿ ಕುಟುಂಬದ ಪ್ರತಿಯೊಬ್ಬರಿಗೂ ಅನುಕೂಲವಾಗಲು ಅಂತ್ಯೋದಯ ಕಾರ್ಡ್ ನೀಡಬೇಕು. ಅಲ್ಲದೇ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಭ್ರಷ್ಟಾಚಾರ ವಿರೋಧಿ ಆಂದೋಲನ ತಾಲೂಕಾಧ್ಯಕ್ಷ ನಿಂಗಪ್ಪ ಬಡಿಗೇರ, ಪಪಂ ಸದಸ್ಯೆ ಯಲ್ಲಮ್ಮ ಭಜಂತ್ರಿ, ಗುಡಗೇರಿ ಗ್ರಾಪಂ ಸದಸ್ಯೆ ನಿಂಗಮ್ಮ ಹೈಗರ, ಹನುಮಂತಪ್ಪ ದುರ್ಗ, ಡಿ.ಆರ್. ಲಿಂಗರಾಜ, ನಿಂಗಪ್ಪ ಹಡಪದ, ವಸಂತ ಗೊರವರ, ಮಂಜುನಾಥ ಅಣ್ಣಿಗೇರಿ ವಿನಾಯಕ ಲಕ್ಕುಂಡಿ, ಗಂಗಾಧರ ಧರೆಣ್ಣವರ, ವಸಂತಪ್ಪ ಬ್ಯಾಡಗಿ ನೂರಾರು ಜೋಗತಿಯರು, ಗೊರವಪ್ಪ, ಗೊರವಮ್ಮಗಳು, ಚಾಕರೀಕಾರರು ಸಹಿತ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.