ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ನಾಟಕ ಪ್ರದರ್ಶನ

Vishwanath S
Updated On : 9 Nov 2013, 12:36 pm

ಧಾರವಾಡ: ಕನ್ನಡ ಕಲಾ ಸೇವಾ ಸಂಘದಿಂದ ಎಲ್.ಜಿ. ದೇವಾಂಗಮಠ ರಚನೆ, ನಿರ್ದೇಶನದ ಹಾಸ್ಯ ನಾಟಕ ನನಗೆಲ್ಲಾ ಗೊತೈತಿ ಪ್ರದರ್ಶನ ನ. 9ರಂದು ಸಂಜೆ 6ಕ್ಕೆ ರಂಗಾಯಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ನಿರ್ದೇಶಕ ಅರವಿಂದ ಮುಳಗುಂದ ಉದ್ಘಾಟಿಸಲಿದ್ದು, ಬಿ.ಡಿ. ಹಿರೇಗೌಡರ, ಎಸ್.ಎಸ್. ಚಿಕ್ಕಮಠ, ಎಸ್.ಡಿ. ಭೋಸಲೆ, ಮಂಜು ಅಂಗಡಿ ಭಾಗವಹಿಸಲಿದ್ದು, ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸುತ್ತಾರೆಂದು ಪ್ರಕಟಣೆ ತಿಳಿಸಿದೆ.
ಕಲ್ಮೇಶ್ವರ ಮರಿದೇವರ ಪ್ರಾಣ ಪ್ರತಿಷ್ಠಾನ ಇಂದು
ಅಣ್ಣಿಗೇರಿ: ಸಮೀಪದ ಕಿತ್ತೂರಿನ ಕಲ್ಮೇಶ್ವರ ಮಠದಲ್ಲಿ ನ. 9 ಮತ್ತು 10ರಂದು ಕಲ್ಮೇಶ್ವರ ಮರಿದೇವರ ಅಮೃತ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾನ ಹಾಗೂ ಬಸವಣ್ಣ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ಜರುಗಲಿದೆ. ಅಡ್ನೂರಿನ ಪಂಚಾಕ್ಷರಿ ಶ್ರೀಗಳ ಸಾನ್ನಿಧ್ಯ ವಹಿಸುವರು. ಹೊಳೆಇಟಗಿಯ ಮಡಿವಾಳೇಶ್ವರ ಶ್ರೀಗಳು, ಕಟ್ನೂರ ಶ್ರೀಗಳು, ಗದಗಿನ ಪಂಚಾಕ್ಷರಿ ಮಠದ  ಕಲ್ಲಯ್ಯಜ್ಜನವರು, ಕಣ್ಣೂರ ವಿಶ್ವ ರಾಜೇಂದ್ರ ಹಿರೇಮಠ ಶ್ರೀಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಕಲ ಭಕ್ತಾದಿಗಳು ಭಾಗವಹಿಸಿ ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕು ಎಂದು ಕಿತ್ತೂರು ಸುಕ್ಷೇತ್ರ ಸದ್ಭಕ್ತರು ವಿನಂತಿಸಿದ್ದಾರೆ.
ಕೊಲೆ ಆರೋಪಿ ಬಂಧನ
ಧಾರವಾಡ: ತಾನು ಪ್ರೀತಿಸಿದ ಹುಡುಗಿ ಬಗ್ಗೆ ಹಿರಿಯರಲ್ಲಿ ಹೇಳಿದ್ದಕ್ಕಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ವಶವಾಗಿದ್ದಾನೆ. ಇತ್ತೀಚೆಗೆ ನಡೆದ ತಾಲೂಕಿನ ಕವಲಗೇರಿಯ ಶಿವಾನಂದ ಕೃಷ್ಣಾಜಿ ಹೈಬತ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅದೇ ಗ್ರಾಮದವನೇ ಆದ ಈರಪ್ಪ ಚನ್ನಬಸಪ್ಪ ಲಿಗಾಡೆನನ್ನು ಬಂಧಿಸಿದ್ದಾರೆ. ಶಿವಾನಂದ ಹೈಬತ್ತಿಯನ್ನು ಕಳೆದ ತಿಂಗಳು 15ರಂದು ಕಲ್ಲಿನಿಂದ ಹೊಡೆದು ಕೊಲೆಗೈದು ಧಾರವಾಡ-ಸವದತ್ತಿ ರಸ್ತೆಯಲ್ಲಿನ ಪೀರಗಣಿ ದರ್ಗಾ ಬಳಿ ಎಸೆಯಲಾಗಿತ್ತು. ಈರಪ್ಪ ಲಿಗಾಡೆ ಪ್ರೀತಿಸುತ್ತಿದ್ದ ಹುಡುಗಿಯ ಬಗ್ಗೆ ಹಿರಿಯರ ಬಳಿ ಶಿವಾನಂದ ಹೈಬತ್ತಿ ಹೇಳಿದ್ದನು. ಅಲ್ಲದೆ, ಶಿವಾನಂದ ಹೈಬತ್ತಿ ನೀಡಿದ್ದ ರು. 25 ಸಾವಿರ ವಾಪಸ್ಸು ಕೊಡುವಂತೆ ಒತ್ತಾಯಿಸುತ್ತಿದ್ದನು. ಇದರಿಂದ ಕೋಪಗೊಂಡ ಈರಪ್ಪ ಪಕ್ಕದ ಅಮ್ಮಿನಭಾವಿ ಗ್ರಾಮದಲ್ಲಿ ಶಿವಾನಂದನಿಗೆ ಮದ್ಯ ಸೇವಿಸಲು ಕರೆದುಕೊಂಡು ಹೋಗಿ ಬರುವಾಗ ರಸ್ತೆಯಲ್ಲಿ ಆತನನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ನಡೆಸಿದ ಗ್ರಾಮೀಣ ವೃತ್ತದ ಸಿಪಿಐ ಡಿ. ಅಶೋಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಲ್ಲವ್ವ ಲಂಕೆಪ್ಪ ಆಡಕಾವು
ಅಣ್ಣಿಗೇರಿ: ಪಟ್ಟಣದ ಕಲ್ಲವ್ವ ಲಂಕೆಪ್ಪ ಆಡಕಾವು (52) ಎಂಬುವವರು ಶುಕ್ರವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಮೂವರು ಪುತ್ರರು, ಪತಿ, ಬಂಧು, ಬಳಗ ಇದ್ದಾರೆ.
ನಾಳೆ ಉಚಿತ ಆರೋಗ್ಯ ತಪಾಸಣೆ
ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಮೊರಾರ್ಜಿ ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನ. 10ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಸ್ವಸ್ತಿಕ್ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಮತ್ತು ಲ್ಯಾಬ್ ಹಾಗೂ ಸ್ಪಂದನ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಈ ಶಿಬಿರವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ, ಆಕ್ಸ್‌ಫರ್ಡ್ ಕಾಲೇಜಿನ ಅಧ್ಯಕ್ಷ ವಸಂತ ಹೊರಟ್ಟಿ, ಮಹಾನಗರ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ ಹಾಗೂ ಸತೀಶ ಹಾನಗಲ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಸ್ಪಂದನ ಫೌಂಡೇಶನ್ ಅಧ್ಯಕ್ಷ ರಾಮನಾಥ ಶೆಣೈ ಅಧ್ಯಕ್ಷತೆ ವಹಿಸುವರು.  ಪೆಥಾಲಜಿಸ್ಟ್ ಡಾ. ಎಂ.ಜೆ. ಜೀವಣ್ಣವರ, ಸ್ತ್ರೀರೋಗ ತಜ್ಞೆ ಡಾ. ನೀಲಾ ದೀಕ್ಷಿತ್, ಜನರಲ್ ಸರ್ಜನ್ ಡಾ. ಕೆ.ವಿ. ಉದಯಕುಮಾರ ಹಾಗೂ ಮಧುಮೇಹ ಮತ್ತು ಹೃದ್ರೋಗ ತಜ್ಞ ಡಾ. ಅಮೀತ ಖಟಾವಕರ ಆರೋಗ್ಯ ತಪಾಸಣೆ ನಡೆಸಿ, ಸಲಹೆ ಹಾಗೂ ಚಿಕಿತ್ಸೆ ನೀಡುವರು. ರಕ್ತದೊತ್ತಡ, ಮಧುಮೇಹ, ರಕ್ತತಪಾಸಣೆ ಹಾಗೂ ಇಸಿಜಿಯನ್ನು ಉಚಿತವಾಗಿ ತಪಾಸಣೆ ಮಾಡಿ, ಕೆಲ ಔಷಧಿಗಳನ್ನು ಉಚಿತವಾಗಿ ಪೂರೈಸಲಾಗುವುದು ಎಂದು ಫೌಂಡೇಶನ್ ಕಾರ್ಯದರ್ಶಿ ನವೀದ್ ಮುಲ್ಲಾ ತಿಳಿಸಿದ್ದಾರೆ.
ಜಲಸಂಪನ್ಮೂಲ ಸಚಿವರ ಪ್ರವಾಸ
ಧಾರವಾಡ: ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ನ. 13ರಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಧಾರವಾಡ ವ್ಯಾಪ್ತಿಯ ಮಲಪ್ರಭಾ ಯೋಜನಾ ವಲಯದಲ್ಲಿನ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡುವರು. ಮಧ್ಯಾಹ್ನ 12ಕ್ಕೆ ರೈತ ಪ್ರತಿನಿಧಿಗಳ, ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಸಿ, ಮಧ್ಯಾಹ್ನ 2-30ಕ್ಕೆ ಹಾವೇರಿಗೆ ತೆರಳುವರು ಎಂದು ವಾರ್ತಾ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement