ಕೃಷಿ ವಿವಿ ಕುಲಪತಿ ನೇಮಕಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 8
ನಗರದ ಕೃಷಿ ವಿಶ್ವವಿದ್ಯಾಲಯಕ್ಕೆ ಹಿರಿಯ ಪ್ರಾಧ್ಯಾಪಕ ಡಾ.ಎಲ್. ಕೃಷ್ಣಾನಾಯ್ಕ ಅವರನ್ನು ಕುಲಪತಿಗಳನ್ನಾಗಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಕೃಷಿ ವಿವಿ ಕಳೆದ ಆರು ತಿಂಗಳಿನಿಂದ ಪ್ರಭಾರಿ ಕುಲಪತಿಗಳನ್ನು ನೇಮಿಸುವುದು ಕೃಷಿ ವಿವಿಯ ಅಧಿನಿಯಮದ ಸ್ಪಷ್ಟ ಉಲ್ಲಂಘನೆ. ರಾಜ್ಯಪಾಲರು ಮತ್ತೆ ಎರಡು ತಿಂಗಳ ಅವಧಿಗೆ ಈಗಿರುವ ಪ್ರಭಾರಿ ಕುಲಪತಿ ಡಾ.ಎಚ್.ಎಸ್. ವಿಜಯಕುಮಾರ ಅವರನ್ನೇ ಮುಂದುವರೆಸಲು ಆದೇಶಿಸಿದ್ದು ಖಂಡನೀಯ ಎಂದರು.
ಈ ಹಿಂದೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಡಾ. ಕೃಷ್ಣಾನಾಯ್ಕ ಅವರು ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸೇವಾ ಜ್ಯೇಷ್ಠತಾ ಆಧಾರದ ಮೇಲೆ ಅವರು ಕುಲಪತಿ ಆಗಬಹುದು ಎಂದು ಶಕುಂತಲಾ ವಾಲೀಕಾರ, ಎಚ್. ರಾಮಣ್ಣಾ, ವಿನಾಯಕ ಜಾಧವ, ಪ್ರಕಾಶ ಕಲಾಜ, ಲಕ್ಷ್ಮಣ ದೊಡ್ಡಮನಿ, ರಾಜು ಹರಿಜನ, ಕೃಷ್ಣ ಜಕ್ಕಪ್ಪನವರ, ನಾರಾಯಣ ಮಾದರ, ಶಶಿಕಲಾ ತಿಮ್ಮನಪೇಟ ಒತ್ತಾಯಿಸಿದರು.