ಮಗ, ಪತಿಗಾಗಿ ಬೀದಿಗೆ ಬಿದ್ದ ಹಜರತಬೀ
ಧಾರವಾಡ: ಕಾಣೆಯಾದ ಮಗನನ್ನು ಪತ್ತೆ ಮಾಡಲು ಹೋದ ಪತಿಯೂ ಕಾಣೆಯಾಗಿ, ಈಗ ಮಗ ಹಾಗೂ ಪತಿಯನ್ನು ಹುಡುಕಿಕೊಂಡು ಬರಲು ಸ್ವತಃ ಮಹಿಳೆಯೊಬ್ಬರು ಬೀದಿಗೆ ಬಂದಿರುವ ಕರುಣಾಜನಕ ಕಥೆ ಇದು.
-ಕಳೆದ ಏಳು ತಿಂಗಳಿಂದ ಕಾಣೆಯಾದ ಮಗ ಹಾಗೂ ಮೂರು ತಿಂಗಳಿಂದ ಕಾಣೆಯಾದ ಪತಿಯನ್ನು ಹುಡುಕಲು ಕುಂದಗೋಳ ತಾಲೂಕಿನ ಹಜರತಬೀ ಹುಸೇನಸಾಬ ಬೆಟಗೇರಿ ಈಗ ಊರೂರು ಅಲೆಯುವ ಸ್ಥಿತಿ ಬಂದೊದಗಿದೆ.
ಏನಿದು ಕಥೆ...?: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ 22 ವರ್ಷದ ಅಬ್ಬಾಸಅಲಿ ಎಂಬಾತನನ್ನು ಆತನ ಚಿಕ್ಕಪ್ಪನ ಮಗ ರಫೀಕ ಕಡಕೋಳ ಎಂಬಾತ ಕಳೆದ ಏ. 4ರಂದು ಕುಂದಗೋಳಕ್ಕೆ ಗೌಂಡಿ ಕೆಲಸಕ್ಕೆಂದು ಕರೆದೊಯ್ಯಿದ್ದಾನೆ. ಆದರೆ, ಕೆಲಸಕ್ಕೆ ಹೋದ ಅಬ್ಬಾಸಅಲಿ ಮರಳಿ ಮನೆಗೆ ಬರಲೇ ಇಲ್ಲ. ಎರಡು ದಿನ ಕಳೆದ ಮೇಲೆ ಕೆಲಸಕ್ಕೆಂದು ಕರೆದುಕೊಂಡು ಹೋದ ರಫೀಕನನ್ನು ತಾಯಿ ಹಜರತಬೀ ಹಾಗೂ ತಂದೆ ಹುಸೇನಸಾಬ ಪ್ರಶ್ನಿಸಿದ್ದಾರೆ. ಆಗ ಬಂದ ಉತ್ತರ ಗೊತ್ತಿಲ್ಲ. ಹೀಗೆ ಮೂರು ತಿಂಗಳು ಮಗನನ್ನು ಹುಡುಕಾಡಿದ ದಂಪತಿ ಕೊನೆಗೆ ಜುಲೈ 2ಕ್ಕೆ ಕುಂದಗೋಳ ತಾಲೂಕಿನಲ್ಲಿ ದೂರು ದಾಖಲಿಸಿದ್ದಾರೆ.
ದಂಪತಿಗೆ ಒಬ್ಬನೇ ಮಗನಿದ್ದು, ಪೊಲೀಸರು ಆತನನ್ನು ಹುಡುಕಿ ತರದಿದ್ದಾಗ ತಂದೆ ಹುಸೇನಸಾಬ ಮಗನನ್ನು ಹುಡುಕಲು ತಾವೇ ಹೋಗಿದ್ದು, ಇನ್ನುವರಿಗೂ ಪತ್ತೆಯಾಗಿಲ್ಲ. ಮಗ, ಪತಿಗಾಗಿ ಸಂಬಂಧಿಕರು ಹಾಗೂ ಹುಡುಕದ ಸ್ಥಳವಿಲ್ಲ.
ಈ ಹಿನ್ನೆಲೆಯಲ್ಲಿ ಹಜರತಬೀ ಈಗ ಕಂಗಾಲಾಗಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಗೆ ಹೋಗಿ ಬಂದೂ ಬೇಸತ್ತಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಸೋತಿದ್ದಾರೆ. ಕೊನೆಗೆ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ಹಜರತಬೀ ಸಿಕ್ಕಸಿಕ್ಕವರಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದರು.
ಪೊಲೀಸರು ಬರೀ ಹುಡುಕಿಕೊಡುವ ಭರವಸೆ ಮಾತ್ರ ನೀಡುತ್ತಿದ್ದಾರೆ. ಅವರಿಬ್ಬರನ್ನು ಹುಡುಕಿಕೊಂಡೇ ನಾನು ಮರಳಿ ನಮ್ಮೂರಿಗೆ ಹೋಗುತ್ತೇನೆ ಎಂದು ಹಜರತಬೀ ಗೋಳಾಡುತ್ತಾರೆ. ಹೀಗಾಗಿ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ವಿಶೇಷ ಆಸಕ್ತಿ ವಹಿಸಿ ಕಳೆದು ಹೋಗಿರುವ ಕುಟುಂಬವನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಬೇಕಿದೆ.