ಮುತಾಲಿಕರನ್ನು ಗಡಿಪಾರು ಮಾಡಿ: ಬಿಎಸ್ಪಿ ಒತ್ತಾಯ
ಹುಬ್ಬಳ್ಳಿ: ಶ್ರೀರಾಮ ಸೇನೆ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಹಿಂದು ಜಾಗೃತ ಸಮಾವೇಶವನ್ನು ರದ್ದುಪಡಿಸಬೇಕು ಹಾಗೂ ಶ್ರೀರಾಮ ಸೇನೆಯನ್ನು ನಿಷೇಧಿಸಿ, ಪ್ರಮೋದ ಮುತಾಲಿಕ ಹಾಗೂ ಬೆಂಬಲಿಗರನ್ನು ಗಡಿಪಾರು ಮಾಡಬೇಕು ಎಂದು ಬಹುಜನ ಸಮಾಜ ಪಾರ್ಟಿ ಒತ್ತಾಯಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಿಎಸ್ಪಿ ಧಾರವಾಡ ಜಿಲ್ಲಾ ಘಟಕದ ಮುಖಂಡ ಈರಪ್ಪ ಮಾದರ, ಶ್ರೀರಾಮ ಸೇನೆಯಲ್ಲಿ ಇರುವವರು ಡೋಂಗಿ ದೇಶಭಕ್ತರು. ಇಂಥವರಿಂದ ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
ಶಿಂದಗಿಯಲ್ಲಿ ನಡೆದ ಪಾಕಿಸ್ತಾನ ಧ್ವಜ ಹಾರಾಟದ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರ ಕೈವಾಡ ಇರುವುದು ಬಯಲಾಗಿದೆ. ಮಂಗಳೂರಿನಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿದ್ದ ಮಹಿಳೆಯರ ಮೇಲೆ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಅಸ್ಸಾರಾಮ್ ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ದೇಶದ್ರೋಹದ ಇಂಥ ಹೇಯ ಕೃತ್ಯಗಳಲ್ಲಿ ತೊಡಗಿದವರಿಂದ ಸಾರ್ವಜನಿಕರು ದೇಶಭಕ್ತಿಯ ಪಾಠ ಕಲಿಬೇಕಿಲ್ಲ ಎಂದು ಹೇಳಿದರು.
ಬಿಎಸ್ಪಿ ಮತ್ತೊಬ್ಬ ಮುಖಂಡ ದಸ್ತಗೀರ ಮುಲ್ಲಾ ಮಾತನಾಡಿ, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರು ಧಾರವಾಡ ಅಥವಾ ಬಾಗಲಕೋಟಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ತಾವು ಸಹ ಚುನಾವಣೆಗೆ ಸ್ಪರ್ಧಿಸುವುದಾಗಿ ಸವಾಲು ಹಾಕಿದರು.
ಬಿಎಸ್ಪಿ ಧಾರವಾಡ ಜಿಲ್ಲಾ ಸಂಯೋಜಕ ಪ್ರೇಮನಾಥ ಚಿಕ್ಕತುಂಬಳ ಹಾಜರಿದ್ದರು.