ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಪ್ಪತಗುಡ್ಡ ಸಂರಕ್ಷಣೆ ಕುರಿತು ಸದನದಲ್ಲಿ ಚರ್ಚಿಸುವೆ: ಹೊರಟ್ಟಿ

Vishwanath S
Updated On : 10 Nov 2013, 12:13 pm

ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 9
ಉತ್ತರ ಕರ್ನಾಟಕದ ಸಹ್ಯಾದ್ರಿಯಂತಿರುವ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು, ಈ ಕುರಿತು ಸದನದಲ್ಲಿಯೇ ಪ್ರಶ್ನಿಸುವೆ ಎಂದು ವಿಪ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಅವರು ಶನಿವಾರ ಮುಂಡರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಪ್ಪತಗುಡ್ಡದ ಅನೇಕ ಕಡೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಇಲ್ಲಿ ಸಿಗುವ ಖನಿಜ ಸಂಪತ್ತಿಗೆ ಆಪತ್ತು ಬರುತ್ತದೆ. ಗಣಿಗಾರಿಕೆಯಿಂದ ಇಲ್ಲಿನ ಅರಣ್ಯ ಸಂಪತ್ತು ಹಾಳಾಗುವುದಲ್ಲದೆ ಪ್ರಾಣಿ ಸಂಪತ್ತಿಗೆ ಕುತ್ತು ಬರುತ್ತದೆ. ಜಿಲ್ಲೆಯ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಹಬ್ಬಿಕೊಂಡಿರುವ ಔಷಧಿ ಸಸ್ಯಗಳಿಗೆ ಹೆಸರುವಾಸಿಯಾಗಿರುವ ಕಪ್ಪತಗುಡ್ಡವನ್ನು ಸರ್ಕಾರ ಕಾಳಜಿ ವಹಿಸಿ ಸಂರಕ್ಷಿಸಬೇಕು ಎಂದರು.
ಕಾಂಗ್ರೆಸ್‌ನವರು ಬಳ್ಳಾರಿಯ ಗಣಿಗಾರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ವರ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ನಮ್ಮ ಪ್ರಾಕೃತಿಕ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳದೇ ಇರುವುದು ವಿಷಾದದ ಸಂಗತಿ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಕಪ್ಪತಗುಡ್ಡದ ಸಂರಕ್ಷಣೆ ಕುರಿತು ಮಾತನಾಡುವುದಾಗಿ ಹೇಳಿದರು.
ಖಾಸಗಿ ಶಾಲೆಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಿಲ್ಲ. ಹೆಚ್ಚು ಇಂಗ್ಲಿಷ್ ಶಾಲೆಗಳ ಪ್ರಾರಂಭಕ್ಕೆ ಅನುಮತಿ ಕೊಡುತ್ತಿರುವುದರಿಂದ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಂಡುಬರುತ್ತಿದ್ದು, 2020ರ ಹೊತ್ತಿಗೆ ಕನ್ನಡ ಶಾಲೆಗಳು ಸಂಪೂರ್ಣ ಇಲ್ಲದಂತೆ ಆದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ನಿರಂತರ ಮೌಲ್ಯಮಾಪನ ಪದ್ಧತಿ ಅವೈಜ್ಞಾನಿಕವಾಗಿದ್ದು ಅದನ್ನು ಕೈಬಿಡಬೇಕು. ಸಿಬಿಎಸ್‌ಸಿ ಶಾಲೆಗಳನ್ನು ಮಾತೃ ಭಾಷೆಯಲ್ಲಿಯೇ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭ ಡಾ. ಬಸವರಾಜ ಧಾರವಾಡ, ಪಿ.ಎಂ. ಪಾಟೀಲ, ಕೆ.ಎ. ಹಿರೇಮಠ ಮುಂತಾದವರು ಹಾಜರಿದ್ದರು.
ಕಪ್ಪತಗುಡ್ಡದ ಅನೇಕ ಕಡೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಇಲ್ಲಿ ಸಿಗುವ ಖನಿಜ ಸಂಪತ್ತಿಗೆ ಆಪತ್ತು ಬರುತ್ತದೆ. ಗಣಿಗಾರಿಕೆಯಿಂದ ಇಲ್ಲಿನ ಅರಣ್ಯ ಸಂಪತ್ತು ಹಾಳಾಗುವುದಲ್ಲದೆ ಪ್ರಾಣಿ ಸಂಪತ್ತಿಗೆ ಕುತ್ತು ಬರುತ್ತದೆ. ಜಿಲ್ಲೆಯ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಹಬ್ಬಿಕೊಂಡಿರುವ ಔಷಧಿ ಸಸ್ಯಗಳಿಗೆ ಹೆಸರುವಾಸಿಯಾಗಿರುವ ಕಪ್ಪತಗುಡ್ಡವನ್ನು ಸರ್ಕಾರ ಕಾಳಜಿ ವಹಿಸಿ ಸಂರಕ್ಷಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement