ತೋಟಗಾರಿಕೆ ಕೃಷಿಗೂ ಹೆಚ್ಚಿದ ಮಹತ್ವ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 9
ಕೃಷಿ ಇಲಾಖೆ ಮೂಲಕ ಇರುವ ಯೋಜನೆಗಳಂತೆಯೇ ತೋಟಗಾರಿಕಾ ಕೃಷಿಯನ್ನು ಮತ್ತಷ್ಟು ಸಮೃದ್ಧಿಗೊಳಿಸಲು ತೋಟಗಾರಿಕಾ ಇಲಾಖೆಯಲ್ಲಿ ಹತ್ತಾರು ಯೋಜನೆಗಳಿವೆ. ಇತ್ತೀಚೆಗಂತೂ ಹಣ್ಣು-ತರಕಾರಿ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ತೋಟಗಾರಿಕಾ ಕ್ಷೇತ್ರಕ್ಕೆ ಬಲು ಮಹತ್ವ ಬಂದಿದೆ. ಹೀಗಾಗಿ ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಹಿಂದಿನಗಿಂತಲೂ ಈಗ ಹೆಚ್ಚಿನ ಮಹತ್ವದ ಕಾರ್ಯಕ್ರಮಗಳು ರೂಪಿಸುತ್ತಿದೆ.
ಸಾಂಪ್ರದಾಯಿಕ ಬೆಳೆಗಳಾದ ಣತ್ತ, ಜೋಳ, ಗೋವಿನ ಜೋಳ, ರಾಗಿ, ಗೋದಿ, ಕಡಲೆ ಜೊತೆಗೆ ಇತ್ತೀಚೆಗೆ ರೈತರು ಮಾವು, ಚಿಕ್ಕು, ಪೇರಲ, ಗೋಡಂಬಿ ಹಾಗೂ ಹೂವಿನ ಬೆಳೆಗಳಂತಹ ತೋಟಗಾರಿಕೆ ಬೆಳೆಗಳಿಗೂ ಹೊರಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಾರು 50 ಸಾವಿರದಷ್ಟಿದ್ದ ತೋಟಗಾರಿಕಾ ಬೆಳೆ ಕ್ಷೇತ್ರ ಪ್ರಸ್ತುತ 74 ಸಾವಿರ ಹೆಕ್ಟೇರ್ ಮೇಲ್ಪಟ್ಟಿದೆ ಎಂಬುದು ತೋಟಗಾರಿಕೆ ಇಲಾಖೆ ಮಾಹಿತಿ. ಇಲಾಖೆಯು ಬೀಜದಿಂದ ಹಿಡಿದು ಬೆಳೆ ಮಾರಾಟದ ವರೆಗೂ ರೈತರಿಗೆ ಸಹಾಯಧನ, ರಿಯಾಯ್ತಿ ಅನುಕೂಲಗಳನ್ನು ಕಲ್ಪಿಸಿದ್ದು, ರೈತರು ಈ ಕುರಿತು ಜಾಗೃತಿ ಹೊಂದಬೇಕಷ್ಟೇ.
ರಾಷ್ಟ್ರೀಯ ತೋಟಗಾರಿಕಾ ಮಿಶನ್: ತೋಟಗಾರಿಕೆ ಬೆಳೆಗಳ ಬೀಜೋತ್ಪಾದನೆ ಮಾಡಿದ ರೈತರಿಗೆ ಅಥವಾ ಸಾರ್ವಜನಿಕರಿಗೆ ಶೇ. 100ರಷ್ಟು ಅಥವಾ ಸಂಘ-ಸಂಸ್ಥೆಗಳಿಗೆ ಶೇ. 50ರಷ್ಟು ಸಹಾಯಧನ ಇಲಾಖೆಯಿಂದ ದೊರೆಯುತ್ತದೆ. ತೋಟಗಾರಿಕಾ ಪ್ರದೇಶ ವಿಸ್ತರಣೆಗಾಗಿ ಮಾವು, ಚಿಕ್ಕು, ಗೋಡಂಬಿ, ಹೂವಿನ ಬೆಳೆ ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಶೇ. 50ರಷ್ಟು ಸಹಾಯಧನ ದೊರೆಯುತ್ತಿದೆ. ಸಮಗ್ರ ಪೀಡೆ ಹಾಗೂ ಪೋಷಕಾಂಶಗಳ ನಿರ್ವಹಣೆಗೆ ಶೇ. 50ರಷ್ಟು ಸಹಾಯಧನವಿದೆ. ಸಾವಯವ ಕೃಷಿ ಪದ್ಧತಿ, ಎರೆಹುಳು ಮತ್ತು ಜೀವಸಾರಕ ಘಟಕ ತೆರೆಯಲು ಇಲಾಖೆಯಿಂದ ಶೇ. 50ರಷ್ಟು ಸಹಾಯ ಸಿಗಲಿದೆ. 20 ಎಚ್.ಪಿ.ಗಿಂತ ಹೆಚ್ಚಿನ ಸಾಮರ್ಥ್ಯದ ಕೃಷಿ ಉಪಕರಣಗಳಿಗೆ ರು. 75 ಸಾವಿರ ಹಾಗೂ 20 ಎಚ್.ಪಿ.ಗಿಂತ ಕಡಿಮೆ ಸಾಮರ್ಥ್ಯದ ಉಪಕರಣಕ್ಕೆ 30 ಸಾವಿರ ದೊರೆಯಲಿದೆ.
ಸಂಸ್ಕರಣೆ, ಮಾರಾಟ: ತೋಟಗಾರಿಕಾ ಬೆಳೆಗಳು ಉಳಿದ ಕೃಷಿ ಬೆಳೆಗಳಿಂತ ಸೂಕ್ಷ್ಮ. ಬೇಗ ಕೆಡುತ್ತವೆ. ಆದ್ದರಿಂದ ಅವುಗಳನ್ನು ಸರಿಯಾಗಿ ಸಂರಕ್ಷಿಸಿ ಮಾರಾಟ ಮಾಡಲು ಇಲಾಖೆಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಉತ್ಪನ್ನಗಳ ದಾಸ್ತಾನು, ಪ್ಯಾಕಿಂಗ್, ತೂಕ ಮಾಡಲು ಪ್ಯಾಕಿಂಗ್ ಹೌಸ್ಗಳನ್ನು ರೈತರು ನಿರ್ಮಿಸಿಕೊಂಡರೆ ರು. 1.50 ಲಕ್ಷದವರೆಗೂ ಇಲಾಖೆ ಸಹಾಯ ಹಸ್ತ ಚಾಚಲಿದೆ. ರೈತರು ಒಗ್ಗಟ್ಟಾಗಿ ನೋಂದಾಯಿತ ಸಂಸ್ಥೆ ಕಟ್ಟಿಕೊಂಡು ಎಪಿಎಂಸಿ ಅಥವಾ ಇನ್ನಿತರೆ ಸ್ಥಳಗಳಲ್ಲಿ ಕಟ್ಟಡ ಕಟ್ಟಿಕೊಂಡು ಪ್ರಾಥಮಿಕ ಕೊಯ್ಲೋತ್ತರ ನಿರ್ವಹಣೆ ಹಾಗೂ ಮಾರಾಟದ ವ್ಯವಸ್ಥೆ ಮಾಡಿಕೊಂಡರೆ ಇಲಾಖೆ ಸಹಕಾರ ನೀಡಲಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ಈ ಯೋಜನೆ ಅಡಿ ಯಂತ್ರೋಪಕರಣಕ್ಕೆ ಸಹಾಯಧನ, ಕೊಯ್ಲು, ಕಳೆ ತೆಗೆಯುವ, ಔಷಧಿ ಸಿಂಪರಣೆ ಯಂತ್ರಗಳು, ಸುಧಾರಿತ ಬೇಸಾಯ ಪದ್ಧತಿಗಳನ್ನು ಶೇ. 50ರ ಸಹಾಯಧನ ನೀಡಲಾಗುವುದು. ಆಲೂಗಡ್ಡೆ ಬೆಳೆ ತುಂಬ ಖರ್ಚುದಾಯಕ ಹಾಗೂ ಅಂಗಮಾರಿ ರೋಗಕ್ಕೆ ಆಗಾಗ ತುತ್ತಾಗುತ್ತಿರುವುದರಿಂದ ಇತ್ತೀಚೆಗೆ ಧಾರವಾಡ ಭಾಗದಲ್ಲಿ ಆಲೂಗಡ್ಡೆ ಕ್ಷೇತ್ರ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬೆಳೆಗೆ ಶೇ. 50ರಷ್ಟು ಸಹಾಯಧನ ಇದೆ. ಅಲ್ಲದೆ, ಪ್ರತಿ ಹೆಕ್ಟೇರ್ಗೆ ರೈತ ರು. 3 ಸಾವಿರ ಬೆಳೆ ವಿಮೆ ತುಂಬಿದರೆ ಇಲಾಖೆ 1500 ತುಂಬುತ್ತದೆ. ಬೆಳೆ ಹಾನಿಯಾದರೆ ಪೂರ್ತಿ ಖರ್ಚನ್ನು ನೀಡಲಾಗುತ್ತದೆ. ಹೀಗೆ ಬಾಳೆ, ಈರುಳ್ಳಿ, ಮೆಣಸಿನಕಾಯಿ ಇನ್ನಿತರೆ ತೋಟಗಾರಿಕಾ ಬೆಳೆಗಳಿಗೆ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ.
ತೋಟಗಾರಿಕಾ ಬೆಳೆ ಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಇಲಾಖೆ ಪ್ರತಿ ವರ್ಷ ನೂತನ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇತ್ತೀಚಿಗಂತೂ ತೋಟಗಾರಿಗೆ ಎಲ್ಲಿಲ್ಲದ ಮಹತ್ವ ಬಂದಿದ್ದು, ರೈತರು ತೋಟಗಾರಿಗೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇಲಾಖೆಯು ವಿವಿಧ ರೀತಿಯಲ್ಲಿ ಯೋಜನೆಗಳನ್ನು ರೈತರಿಗೆ ಮುಟ್ಟಿಸುತ್ತಿದೆ. ಆದರೂ ರೈತರು ಇಲಾಖೆ ಯೋಜನೆಗಳ ಬಗ್ಗೆ ಇನ್ನೂ ಜಾಗೃತರಾಗಿ ಈ ಮೂಲಕ ಯೋಜನೆಗಳನ್ನು ಬಳಸಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ.
-ಪಿ. ಸರಳಮ್ಮ
(ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು, ಧಾರವಾಡ)
ಇನ್ನಷ್ಟು ಯೋಜನೆಗಳು...
ಎಸ್ಸಿ-ಎಸ್ಟಿ ರೈತರಿಗೆ ಸಸಿ, ಗೊಬ್ಬರ, ಔಷಧ, ಬೇಸಾಯ ಪದ್ಧತಿ, ಹನಿ ನೀರಾವರಿಗೆ ಸಹಾಯಧನ ಇದೆ. ಒಂದು ಎಕರೆ ರು. 65 ಸಾವಿರ ಖರ್ಚಾದರೆ ರು. 50 ಸಾವಿರದಷ್ಟು ಸಹಾಯಧನವನ್ನು ಇಲಾಖೆ ನೀಡಲಿದೆ.
ಇತ್ತೀಚೆಗೆ ನಗರ ವಾಸಿಗಳಿಗೆ ಮನೆಯಲ್ಲಿ ತರಕಾರಿ ಹಾಗೂ ಹಣ್ಣು ಉತ್ಪಾದಿಸಲು ಇಲಾಖೆಯು ಕೈತೋಟ ಹಾಗೂ ತಾರಸಿ ತೋಟದ ಸೌಲಭ್ಯ ಒದಗಿಸಿದೆ.
ತೋಟಗಾರಿಕೆ ಇಲಾಖೆಯಿಂದ ಮತ್ತಷ್ಟು ಮಾಹಿತಿಬೇಕಾದಲ್ಲಿ ಕಚೇರಿ ದೂರವಾಣಿ ಸಂಖ್ಯೆ 0836 2746334 ಕರೆ ಮಾಡಬಹುದು.
- ಬಸವರಾಜ ಹಿರೇಮಠ