ಅನ್ನದಾತನ ಕೈಹಿಡಿವ ಪಶುಸಂಗೋಪನೆ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 10
ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಗಳು ಬೇರೆ ಬೇರೆಯಾಗಿದ್ದರೂ ಅವು ಕೃಷಿಗೆ ಸಂಬಂಧಿಸಿದ್ದು. ಪಶು ಪಾಲನಾ ಪಶುವೈದ್ಯಕೀಯ ಸೇವಾ ಇಲಾಖೆಯೂ ವಿವಿಧ ಯೋಜನೆಗಳನ್ನು ರೂಪಿಸುವ ಮೂಲಕ ಪಶುಸಂಗೋಪನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ದೇಶದ ಬೆನ್ನೆಲುಬು ರೈತ. ರೈತನ ಬೆನ್ನೆಲುಬು ಕೃಷಿ. ಕೃಷಿಯ ಬೆನ್ನೆಲುಬು ಪಶುಸಂಗೋಪನೆ. ಪಶುಸಂಗೋಪನೆಯು ಪರಿಸರದ ಸಮತೋಲನ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿ ರೈತಾಪಿ ಸಮುದಾಯಕ್ಕೆ ಪ್ರಮುಖ ಚಟುವಟಿಕೆಯಾಗಿದ್ದು, ರೈತರ ಮುಖ್ಯ ಉಪ ಕಸುಬಾಗಿ ರೂಪುಗೊಂಡು ಆರ್ಥಿಕ ಸಬಲತೆಗೆ ಕಾರಣವಾಗುತ್ತಿದೆ. ದನಗಳು (ವಿವಿಧ ತಳಿಗಳ ಆಕಳು, ಎತ್ತುಗಳು), ಎಮ್ಮೆಗಳು, ಕುರಿ, ಮೇಕೆ, ಕುದುರೆ, ಕತ್ತೆ, ಒಂಟೆ, ಮೊಲ, ಹಂದಿಗಳು ಮತ್ತು ನಾಯಿ ಪಶುಸಂಗೋಪನೆ ವ್ಯಾಪ್ತಿಯಡಿ ಬರುವ ಪ್ರಾಣಿಗಳು.
ಉಚಿತ ಲಸಿಕಾ ಕಾರ್ಯಕ್ರಮ: ಕಾಲುಬಾಯಿ ನಿಯಂತ್ರಣ ಯೋಜನೆ ಅಡಿ ಕಾಲು ಬಾಯಿ ಲಸಿಕೆ ವರ್ಷದಲ್ಲಿ ಎರಡು ಬಾರಿ (ಮಾರ್ಚ್ ಹಾಗೂ ಆಗಸ್ಟ್) ಜಿಲ್ಲೆಯ ಎಲ್ಲ ಜಾನುವಾರುಗಳಿಗೆ ನೀಡಲಾಗುವುದು. ಕಳೆದ ತಿಂಗಳಿಂದ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಎಲ್ಲ ಜಾನುವಾರುಗಳಿಗೆ ನಿರಂತರವಾಗಿ ಲಸಿಕೆ ಹಾಕಲಾಗುತ್ತಿದೆ. ಗಂಟಲು ಬೇನೆ ರೋಗದ ತೀವ್ರತೆ ಎಮ್ಮೆಗಳಲ್ಲಿ ಹೆಚ್ಚಾಗಿದ್ದು, ವರ್ಷಕ್ಕೊಮ್ಮೆ ಮುಂಗಾರು ಹಂಗಾಮಿನ ಮೊದಲಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ದಷ್ಟಪುಷ್ಟ ದನಕರುಗಳಲ್ಲಿ ಚಪ್ಪೆರೋಗ ಸಾಮಾನ್ಯವಾಗಿದ್ದು, ವರ್ಷಕ್ಕೊಮ್ಮೆ ಮುಂಗಾರು ಹಂಗಾಮಿನ ಮೊದಲಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು.
ಕುಂದುರೋಗ ಪ್ರಾಣಿಗಳಿಂದ ಮಾನವರಿಗೆ ಹರಡುವ ಸಾಂಕ್ರಾಮಿಕ ರೋಗ. ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿ ರೋಗ ಕಂಡು ಬಂದ ಮಾದರಿಗಳ ಗ್ರಾಮಗಳಲ್ಲಿ ಎಂಟು ತಿಂಗಳ ಹೆಣ್ಣು ಕರುಗಳಿಗೆ ರಾಷ್ಟ್ರೀಯ ಕುಂದು ರೋಗ ನಿವಾರಣಾ ಕಾರ್ಯಕ್ರಮದಡಿ ಉಚಿತ ಲಸಿಕೆ ಹಾಕಲಾಗುವುದು. ಕುರಿ ಹಾಗೂ ಆಡುಗಳಲ್ಲಿ ಕಾಣುವ ಪಿ.ಪಿ.ಆರ್. ರೋಗಕ್ಕೂ ಉಚಿತ ಲಸಿಕೆ ಇದೆ. ಅದೇ ರೀತಿ ಕುರಿ ಮತ್ತು ಆಡುಗಳಿಗೆ ಬರುವ ಕರಳು ಬೇನೆಗೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ.
ಔಷಧಿ ಪೂರೈಕೆ: ಔಷಧಿ ಮತ್ತು ರಾಸಾಯನಿಕ ಪದಾರ್ಥಗಳ ಪೂರೈಕೆ ಯೋಜನೆಯಡಿ ಜಿಲ್ಲೆಯ 112 ಪಶುವೈದ್ಯಕೀಯ ಸಂಸ್ಥೆಗಳಿಗೆ, ಜಾನುವಾರುಗಳ ಕೃತಕ ಗರ್ಭಧಾರಣೆಗೆ ಅವಶ್ಯವಿರುವ ದ್ರವಸಾರಜನಕ ಪೂರೈಕೆ ಹಾಗೂ ಜಾನುವಾರುಗಳ ಚಿಕಿತ್ಸೆಗಾಗಿ ಔಷಧ ಮತ್ತು ರಾಸಾಯನಿಕಗಳ ಪೂರೈಕೆ.
ಜಾನುವಾರು ಮಾಲೀಕರಿಗೆ ಪಶುವೈದ್ಯಕೀಯ ವಿಜ್ಞಾನದಲ್ಲಿ ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಮಾಹಿತಿ ನೀಡುವ ಪ್ರದರ್ಶನ ಹಾಗೂ ಹಸ್ತಪ್ರತಿ ವಿತರಣೆ, ಜಾನುವಾರುಗಳಲ್ಲಿ ಬಂಜೆತನ ನಿವಾರಣಾ ಸಲುವಾಗಿ ಪ್ರತಿ ತಾಲೂಕುಗಳಲ್ಲಿ ಜಾನುವಾರು ಶಿಬಿರ ಏರ್ಪಾಟು ಮಾಡಲಿದ್ದು, ಜಾನುವಾರು ಹೊಂದಿದ ರೈತರು ಇದರ ಪ್ರಯೋಜನ ಪಡೆಯಬಹುದು.
ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ: ಈ ಯೋಜನೆ ಅಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅಗತ್ಯ ಔಷಧಿ, ಜಂತುನಾಶಕ, ಲವಣ ಮಿಶ್ರಣ ನೀಡಿ ಹಾಲು ಉತ್ಪಾದನೆ ಹೆಚ್ಚಿಸಲಾಗುವುದು. ಆರೋಗ್ಯ ಶಿಬಿರ ಏರ್ಪಾಟು, ಮಾಲೀಕರಿಗೆ ಸುಧಾರಿತ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಹಾಗೂ ಗಿರಿರಾಜ ಕೋಳಿ ಮರಿಗಳನ್ನು ವಿತರಿಸಲಾಗುವುದು. ವಿಶೇಷ ಘಟಕ ಯೋಜನೆಯಡಿ ಪ್ರತಿ ತಾಲೂಕಿನ ಪ.ಜಾತಿಯ ಫಲಾನುಭವಿಗಳಿಗೆ ಮಿಶ್ರತಳಿ ಆಕಳು ಅಥವಾ ಸುಧಾರಿತ ಎಮ್ಮೆ ತಳಿಗಳನ್ನು ಕೊಳ್ಳಲು ರು. 15 ಸಾವಿರ ಬ್ಯಾಂಕ್ ಸಾಲ ಹಾಗೂ ರು. 10 ಸಾವಿರ ಸಹಾಯಧನ ನೀಡಲಾಗುವುದು.
ನಬಾರ್ಡ್ ಸಾಲ ಯೋಜನೆ: ಈ ಯೋಜನೆ ಅಡಿ ಒಂದು ಸಾವಿರ ತತ್ತಿ ಕೋಳಿಯ ಘಟಕ ಸ್ಥಾಪಿಸಲು ಸಾಮಾನ್ಯ ವರ್ಗದವರಿಗೆ ರು. 6.42 ಲಕ್ಷ ಸಾಲ 1.25 ಲಕ್ಷ ಸಹಾಯಧನ, ಎಸ್ಸಿ ಎಸ್ಟಿ ಫಲಾನುಭವಿಗಳಿಗೆ 6.03 ಲಕ್ಷ ಸಾಲ 1.65 ಲಕ್ಷ ಸಹಾಯಧನದಲ್ಲಿ ಘಟಕ ಸ್ಥಾಪಿಸಿಕೊಡಲಾಗುವುದು. ಮಾಂಸದ ಕೋಳಿ ಸಾಕಾಣಿಕೆ ಯೋಜನೆಯಡಿ ಸಾವಿರ ಮಾಂಸದ ಕೋಳಿಯ ಘಟಕ ಸ್ಥಾಪಿಸಲು ಸಾಮಾನ್ಯ ವರ್ಗದವರಿಗೆ 1.60 ಲಕ್ಷ ಸಾಲದ ಪೈಕಿ 50 ಸಾವಿರ ಸಹಾಯಧನ, ಪ. ಪಂಗಡಕ್ಕೆ ಪೂರ್ತಿ ಸಹಾಯಧನ ನೀಡಲಾಗುವುದು.
ಜನಶ್ರೀ ವಿಮಾ ಯೋಜನೆ: ಈ ಯೋಜನೆಯಡಿ ಕುರಿ ಸಾಕಣಿಕೆದಾರರು ತಮ್ಮಲ್ಲಿರುವ 10 ಕುರಿಗಳನ್ನು ವಿಮೆಗೆ ಒಳಪಡಿಸಬಹುದು. ವಿಮೆ ಮೊತ್ತ ರು. 112 ಆಗಿದ್ದು, ಕುರಿಗಾರರು ರು. 20 ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ 92 ತುಂಬುತ್ತದೆ. ಅವಧಿ ಒಂದು ವರ್ಷದ್ದಾಗಿದ್ದು, ಕುರಿಗಳು ದುರ್ಮರಣ ಹೊಂದಿದರೆ ಒಂದು ಕುರಿಗೆ ರು. 2500 ಸಂದಾಯ ಮಾಡಲಾಗುವುದು.
ನಮ್ಮ ರೈತ ಯೋಜನೆ
ದೇಶದ ಬೆನ್ನೆಲುಬು ರೈತ. ರೈತನ ಬೆನ್ನೆಲುಬು ಕೃಷಿ. ಕೃಷಿಯ ಬೆನ್ನೆಲುಬು ಪಶುಸಂಗೋಪನೆ. ಪಶುಸಂಗೋಪನೆಯು ಪರಿಸರದ ಸಮತೋಲನ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿ ರೈತಾಪಿ ಸಮುದಾಯಕ್ಕೆ ಪ್ರಮುಖ ಚಟುವಟಿಕೆಯಾಗಿದ್ದು, ರೈತರ ಮುಖ್ಯ ಉಪ ಕಸುಬಾಗಿ ರೂಪುಗೊಂಡು ಆರ್ಥಿಕ ಸಬಲತೆಗೆ ಕಾರಣವಾಗುತ್ತಿದೆ.
- ಬಸವರಾಜ ಹಿರೇಮಠ