ವಿದ್ಯಾವರ್ಧಕ ಸಂಘದಿಂದ ಕನ್ನಡ ಕೈಂಕರ್ಯ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 10
ಅರ್ಥಪೂರ್ಣವಾಗಿ ಕನ್ನಡದ ಕೈಂಕರ್ಯದಲ್ಲಿ ತೊಡಗಿರುವ ವಿದ್ಯಾವರ್ಧಕ ಸಂಘ ರಾಜ್ಯದ ಒಳಗೆ ಹಾಗೂ ಹೊರಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಸವಪ್ರಭು ಹೊಸಕೇರಿ ಹೇಳಿದರು.
ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಕನ್ನಡ ಹಬ್ಬದಲ್ಲಿ ಮಾತನಾಡಿದ ಅವರು, ನಾವಿಂದು ಕನ್ನಡವನ್ನು ಔಪಚಾರಿಕವಾಗಿ ಭಾಷಣಕ್ಕೆ ಬಳಸಿಕೊಳ್ಳುತ್ತಿದ್ದೇವೆ. ನಮ್ಮ ದೇಶ ಹಲವು ಭಾಷಾವಾರು ರಾಜ್ಯಗಳನ್ನು ಹೊಂದಿದ್ದು, ಆಯಾ ರಾಜ್ಯದ ಭಾಷೆಯಲ್ಲಿಯೇ ಅಲ್ಲಿಯ ವ್ಯವಹಾರಗಳು ನಡೆಯಬೇಕು ಮತ್ತು ನಡೆಯುತ್ತಿವೆ. ಆದರೆ, ಕರ್ನಾಟಕದಲ್ಲಿ ಸಂಪೂರ್ಣವಾಗಿ ಕನ್ನಡದಲ್ಲಿ ವ್ಯವಹಾರ ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆ ದೊರೆತ್ತಿದ್ದರೂ ನಮ್ಮ ಸರ್ಕಾರದ ಮುಂದೆ ಸರಿಯಾದ ಯೋಜನೆಗಳಿಲ್ಲ. ಹೀಗಾಗಿ, ಕೇಂದ್ರದ ಅನುದಾನ ಮರಳಿ ಹೋಗಿದ್ದು ಬೇಸರದ ಸಂಗತಿ. ಕನ್ನಡದ ಬಗ್ಗೆ ನಿಜವಾದ ಕಳಕಳಿ ಇದ್ದರೆ ಕನ್ನಡ ಅಭಿವೃದ್ಧಿಗಾಗಿ ಕಾರ್ಯ ಮಾಡಿ ಎಂದರು.
ನುಡಿ ಚಿಂತನೆ ಮಾಡಿದ, ಕವಿವಿ ಕನ್ನಡ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ, ಕರ್ನಾಟಕ ಸಂಸ್ಕೃತಿ-ಭಾಷೆ ಪ್ರಾಚೀನತೆಯಿಂದ ಕೂಡಿದ್ದು, ವೈಭವಯುತವಾಗಿದೆ. ಕನ್ನಡ ಕಾವೇರಿಯಿಂದ ಗೋದಾವರಿ ವರೆಗೆ ಹಬ್ಬಿದೆ. ಕನ್ನಡಿಗರಿಗೆ ಭಾಷಾಭಿಮಾನ ತುಂಬುವ, ಕನ್ನಡ ಜಾಗೃತಿಯುಂಟು ಮಾಡುವ ಯೋಜನೆಗಳನ್ನು ಹಾಕಿಕೊಂಡು ವಿದ್ಯಾವರ್ಧಕ ಸಂಘ ಕನ್ನಡ ಹಬ್ಬ ಆಚರಿಸುತ್ತಿರುವುದು ವೈಶಿಷ್ಟ್ಯ ಪೂರ್ಣ ಎಂದರು.
ಧಾರವಾಡದ ಶ್ರೀದೇವಿ ಮಹಿಳಾ ಮಂಡಳದ ಕಸ್ತೂರಿ ತಿಪ್ಪಣ್ಣವರ ನೇತೃತ್ವದಲ್ಲಿ ನಾಡುಗೀತೆ ಗಾಯನ ನಡೆಯಿತು. ಗೀತಗಾಯನವನ್ನು ಶಿಲ್ಪಾ ನವಲಿಮಠ ನಡೆಸಿಕೊಟ್ಟರು. ಕುಲಕರ್ಣಿ ಹಾರ್ಮೋನಿಯಂ ಹಾಗೂ ಅನಿಲ ಮೇತ್ರಿ ತಬಲಾ ಸಾಥ್ ನೀಡಿದರು.
ಧಾರವಾಡದ ವಿಶ್ವಾಂಭರಿ ನೃತ್ಯ ಶಾಲೆಯ ಅಂಕಿತಾರಾವ್ ನೇತೃತ್ವದಲ್ಲಿ ಕನ್ನಡ ಹಾಡುಗಳಿಗೆ ಮನಮೋಹಕವಾಗಿ ನೃತ್ಯಗಳು ಜರುಗಿದವು. ವಿನುತಾರಾವ್ ಹಾಗೂ ನಿರ್ಮಲಾ ನಿರೂಪಿಸಿದರು.
ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಉಪಾಧ್ಯಕ್ಷರಾದ ಶಿವಣ್ಣ ಬೆಲ್ಲದ, ಗೌರವ ಉಪಾಧ್ಯಕ್ಷರಾದ, ಶತಾಯುಷಿ ಜಿ.ಜಿ. ದೊಡವಾಡ, ಡಾ. ಡಿ.ಎಂ. ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ವಕೀಲರಾದ ಚಿಕ್ಕಣ್ಣವರ, ಲಾಲಬಿ ಹುಲಕೋಟಿ, ಅನಿಲ ದೇಸಾಯಿ, ಡಾ. ಶಶಿಧರ ನರೇಂದ್ರ, ವತ್ಸಲಾ ಕುಲಕರ್ಣಿ ಇದ್ದರು.