ಅನುದಾನ ದುರ್ಬಳಕೆ: ವಿಮ್ಸ್ ಮಾಜಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ನೋಟಿಸ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 11
ವಿಮ್ಸ್ ಹಲವು ವಿವಾದಗಳಿಗೆ ಕಾರಣವಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಗೊಂದಲ ನಿವಾರಣೆ ಆಯ್ತು ಎನ್ನುವಷ್ಟರಲ್ಲಿ, ಇದೀಗ ಹಿಂದಿನ ನಿರ್ದೇಶಕರೊಬ್ಬರಿಗೆ ಬಳ್ಳಾರಿ ಬಿಎಟಿಎಫ್ (ಬಳ್ಳಾರಿ ಅಜೆಂಡಾ ಟಾಸ್ಕ್‌ಪೋರ್ಸ್) ನೀಡಿದ ರು. 10 ಲಕ್ಷವನ್ನು ನಿಯಮ ಪ್ರಕಾರ ಬಳಕೆ ಮಾಡಿಲ್ಲ ಎಂದು ಬಳ್ಳಾರಿ ಡಿಸಿ ನೋಟಿಸ್ ನೀಡಿದ್ದಾರೆ.
ಇದೇವೇಳೆ, ಸರ್ಕಾರ ವಿಮ್ಸ್‌ಗೆ ನೀಡಿರುವ ಅನುದಾನವನ್ನು ನಿಯಮ ಪ್ರಕಾರ ಬಳಕೆ ಮಾಡುವಲ್ಲಿ ವಿಮ್ಸ್‌ನ ಪ್ರಾಂಶುಪಾಲರು ಕೂಡ ನಿಯಮ ಉಲ್ಲಂಘಿಸಿದ್ದು, ಈ ಕುರಿತಾಗಿ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
2011ರಲ್ಲಿ ಅಧಿಕಾರಾವಧಿಯಲ್ಲಿ ಬಳ್ಳಾರಿಯ ಅಜೆಂಡಾ ಟಾಸ್ಕ್‌ಪೋರ್ಸ್‌ನಡಿ ವಿಮ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಡಾ. ಬಿ. ದೇವಾನಂದಗೆ ವಿಮ್ಸ್ ಅಭಿವೃದ್ಧಿಗೆ ರು. 10 ಲಕ್ಷಗಳನ್ನು ನೀಡಿದ್ದರು. ಆದರೆ, ದೇವಾನಂದ ಟೆಂಡರ್ ಕರೆಯದೆ ಕಾಮಗಾರಿ ಕೈಗೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕೆಲ ತಿಂಗಳ ಹಿಂದೆಯೇ ಅವರಿಗೆ ನೋಟಿಸ್ ನೀಡಿದ್ದಾರೆ. ಅವರು ಈ ಕುರಿತಂತೆ ಇಲ್ಲಿವರೆಗೆ ಪ್ರತಿಕ್ರಿಯೆ ನೀಡಿಲ್ಲ. ಇದು ಕೂಡ ವಿಮ್ಸ್ ನಿರ್ದೇಶಕ ದೇವಾನಂದ ಮೇಲಿನ ತನಿಖೆಗೆ ಕಾರಣವಾದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.
ವಿಮ್ಸ್‌ನ ಪ್ರಾಂಶುಪಾಲ ವಿದ್ಯಾಧರ ಅವರು ಸರ್ಕಾರದಿಂದ ಬಿಡುಗಡೆಯಾಗಿದ್ದ ರು. 15ರಿಂದ 20 ಲಕ್ಷಗಳನ್ನು ಪುಸ್ತಕ ಖರೀದಿ ಹಾಗೂ ವಾಹನ ಖರೀದಿಯಲ್ಲಿ ಬಳಕೆ ಮಾಡುವಾಗ ನಿಯಮ ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ವಿಮ್ಸ್ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ತಾವು ತನಿಖೆ ಮಾಡುವುದಕ್ಕೆ ಬಾರದ ಹಿನ್ನೆಲೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಾ. ಬಿ. ದೇವಾನಂದ ವರ್ಗಾವಣೆಯಾದ ನಂತರದಿಂದಲೂ ಬಳ್ಳಾರಿ ವಿಮ್ಸ್‌ನಲ್ಲಿ ಪ್ರಭಾರಿ ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ವಿಮ್ಸ್ ನಿರ್ದೇಶಕರು, ಪ್ರಾಂಶುಪಾಲರು, ಅಧೀಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಕ್ಕೆ ನೋಟಿಫಿಕೆಷನ್ ಹೊರಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಇದೀಗ ಪ್ರಾಂಶುಪಾಲ, ಹಿಂದಿನ ನಿರ್ದೇಶಕರೊಬ್ಬರ ವಿರುದ್ಧ ಕೇಳಿಬರುತ್ತಿರುವ ಆರೋಪ ಕುತೂಹಲ ಕೆರಳಿಸಿದ್ದು, ಮುಂದಿನ ದಿನಗಳಲ್ಲಿ ತನಿಖೆಗೆ ಮುಂದಾದರೂ ಆಶ್ಚರ್ಯ ಪಡಬೇಕಿಲ್ಲ. ಈಗಾಗಲೇ ಪ್ರಾಂಶುಪಾಲರ ಮೇಲೆ ತನಿಖೆ ನಡೆಸುವಂತೆ ಪತ್ರ ಬರೆದಿರುವುದು ಹಾಗೂ ಹಿಂದಿನ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ನೀಡಿರುವುದು ವಿಮ್ಸ್‌ನಲ್ಲಿ ಗುಸು ಗುಸು ಚರ್ಚೆಗೆ ಕಾರಣವಾಗಿದೆ.
ಬಳ್ಳಾರಿ ಅಜೆಂಡಾ ಟಾಸ್ಕ್‌ಪೋರ್ಸ್ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಅನುದಾನವನ್ನು ನೀಡಬಹುದಾಗಿದೆ. ಟಾಸ್ಕ್‌ಪೋರ್ಸ್‌ಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಈ ಟಾಸ್ಕ್‌ಪೋರ್ಸ್‌ನಿಂದ 2011ರಲ್ಲಿ ವಿಮ್ಸ್‌ಗೆ ರು. 10 ಲಕ್ಷ ಅನುದಾನ ನೀಡಲಾಗಿತ್ತು. ಆ ಅನುದಾನವನ್ನು ಟೆಂಡರ್ ಕರೆದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ, ಅಂದಿನ ನಿರ್ದೇಶಕರು ಟೆಂಡರ್ ಕರೆಯದೇ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ ಎಂಬ ಆರೋಪ ವಿದೆ.