ತೋಟಗಾರಿಕೆ ಕೃಷಿಯತ್ತ ರೈತರ ಚಿತ್ತ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 11
ಕೃಷಿ, ತೋಟಗಾರಿಕೆ ಹಾಗೂ ಪಶು ಪಾಲನಾ ಇಲಾಖೆಗಳ ಮೂಲಕ ರೈತರಿಗೆ ಇರುವ ಸಾಕಷ್ಟು ಯೋಜನೆಗಳಂತೆ ಅರಣ್ಯ ಇಲಾಖೆಗಿಲ್ಲ. ಆದರೂ ಇತ್ತೀಚಿನ ಎರಡ್ಮೂರು ವರ್ಷಗಳಿಂದ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ರೈತರು ತೋಟಗಾರಿಕೆಯತ್ತ ಹೊರಳುತ್ತಿದ್ದು, ಈ ಮೂಲಕ ಕೃಷಿ ಅರಣ್ಯಕ್ಕೂ ಆಸಕ್ತಿ ತೋರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು 2011ರಲ್ಲಿ ಜಾರಿ ಮಾಡಿದೆ. ರೈತರು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಲಭ್ಯವಿರುವ ತಮ್ಮ ಜಮೀನಿನಲ್ಲಿ ಸಸಿಗಳನ್ನು ನೆಡುವುದು, ಸಂರಕ್ಷಿಸುವುದು ಹಾಗೂ ಪೋಷಿಸಬಹುದು.
ಸಸಿ ಖರೀದಿ: ಫಲಾನುಭವಿ ಯಾವುದೇ ಮಿತಿಯಿಲ್ಲದೇ ಎಷ್ಟು ಸಂಖ್ಯೆಯ ಸಸಿಗಳನ್ನು ನೆಡಬಹುದು. ಮೊದಲ ವರ್ಷದ ಅಂತ್ಯದಲ್ಲಿ ಬದುಕುಳಿದ ಪ್ರತಿ ಸಸಿಗೆ ಪ್ರಾರಂಭದಲ್ಲಿ ರು. 10, 2ನೇ ವರ್ಷಕ್ಕೆ ರು. 15 ಹಾಗೂ 3ನೇ ವರ್ಷದ ಅಂತ್ಯದಲ್ಲಿ ರು. 20 ಒಟ್ಟು ಮೂರು ವರ್ಷದಲ್ಲಿ ಪ್ರತಿ ಸಸಿಗೆ ರು. 45 ಪ್ರೋತ್ಸಾಹ ಧನ ನೀಡಲಾಗುತ್ತದೆ. ಒಂದು ಹೆಕ್ಟೇರ್‌ನಲ್ಲಿ ಗರಿಷ್ಟ 400 ಸಸಿಗಳಿಗೆ ಪ್ರೋತ್ಸಾಹಧನ ನೀಡಲು ಅವಕಾಶವಿದೆ. ಆಯಾ ವರ್ಷದ ಅಕ್ಟೋಬರ್ 31ರೊಳಗೆ ಚೆಕ್ ಮೂಲಕ ಸಹಾಯಧನ ವಿತರಿಸಲಾಗುವುದು.
ಕೆಲ ಸಸಿಗಳಿಗೆ ಹೆಚ್ಚಿನ ಬೇಡಿಕೆ: ಈ ಯೋಜನೆ ಅಡಿ ಸಸಿಯ ಅಳತೆಗೆ ತಕ್ಕಂತೆ ರು. 1ರಿಂದ ರು. 5ರ ವರೆಗೆ ದರ ನಿಗದಿ ಮಾಡಲಾಗಿದೆ. ಆಸಕ್ತರು ತಮಗೆ ಬೇಕಿರುವ ಸಸಿಗಳ ಜಾತಿ, ಸಂಖ್ಯೆಯನ್ನು ಇಲಾಖೆಯಲ್ಲಿ ಮುಂಚಿತವಾಗಿಯೇ ನೋಂದಾಯಿಸಬೇಕು. ನೀಲಗಿರಿ ಹಾಗೂ ಅಕೇಶಿಯಾ ಹೊರತುಪಡಿಸಿ ಎಲ್ಲ ಜಾತಿ ಸಸಿಗಳನ್ನು ವಿತರಿಸಲಾಗುವುದು. 2011-12ರಲ್ಲಿ 120 ರೈತರು 13,045 ಸಸಿಗಳನ್ನು ನೆಟ್ಟಿದ್ದರೆ, 2012-13ರಲ್ಲಿ 513 ರೈತರು 1,59,517 ರೈತರು ವಿವಿಧ ಸಸಿಗಳನ್ನು ನೆಟ್ಟಿದ್ದಾರೆ. ಪ್ರಸಕ್ತ ವರ್ಷ ನಾಲ್ಕು ಲಕ್ಷ ಸಸಿಗಳನ್ನು ಬೆಳೆಸುತ್ತಿದ್ದು, ಸಾವಿರ ರೈತರಿಗೆ ವಿತರಿಸುವ ಗುರಿ ಇದೆ. ವಿವಿಧ ಸಸಿಗಳ ಪೈಕಿ ಸಾಗವಾನಿಗೆ ಬಹು ಬೇಡಿಕೆ ಇದೆ. ಇದು ರೈತರ ಆದಾಯ ಹೆಚ್ಚಿಸುವ ಯೋಜನೆಯೂ ಹೌದು ಎನ್ನುತ್ತಾರೆ ಅರಣ್ಯ ಇಲಾಖೆ ಪತ್ರಾಂಕಿತ ಅಧಿಕಾರಿ ಪಿ.ಕೆ. ಗಣೇಶಕರ.
ಅಲ್ಲದೇ, ಸಾರ್ವಜನಿಕ ಸಸಿ ವಿತರಣಾ ಯೋಜನೆ ಮೂಲಕವೂ ರೈತರು ಹಾಗೂ ಸಾರ್ವಜನಿಕರಿಗೆ ಸಸಿಗಳ ವಿತರಣೆ ಮಾಡಲಾಗುತ್ತಿದೆ. ದೊಡ್ಡ ರೈತರು ಹಾಗೂ ಆಸಕ್ತ ಸಣ್ಣ ರೈತರು ಕೃಷಿ ಅರಣ್ಯದಲ್ಲಿ ಆಸಕ್ತಿ ತೋರುತ್ತಿದ್ದು, ಈ ಮೂಲಕ ಆರ್ಥಿಕ ಲಾಭ ಪಡೆಯುತ್ತಿದ್ದಾರೆ ಎಂಬುದು ಗಣೇಶಕರ ಅವರ ಅಭಿಪ್ರಾಯ.
ರೈತ ಕೇಂದ್ರವಾಗಲಿ ಕೃಷಿ ವ್ಯವಸ್ಥೆ: ರೈತರಿಗಾಗಿಯೇ ಇರುವ ಕೃಷಿ ವ್ಯವಸ್ಥೆ ರೈತ ಕೇಂದ್ರವಾಗಿರದೆ ಕಂಪನಿ ಕೇಂದ್ರವಾಗಿದ್ದು ದುರದೃಷ್ಟಕರ. ಸ್ವಯಂಸೇವಾ ಸಂಸ್ಥೆ ಮೂಲಕ ಹಲವು ಗ್ರಾಮಗಳಲ್ಲಿ ಸುಸ್ಥಿರ ಕೃಷಿಯನ್ನು ಯಶಸ್ವಿಯಾಗಿ ರೈತರು ಅಳವಡಿಸಿಕೊಳ್ಳಲು ಶ್ರಮಿಸಿದ ಪ್ರಕಾಶ ಭಟ್, ಸರ್ಕಾರದ ಕೃಷಿ ವ್ಯವಸ್ಥೆಯನ್ನು ಈ ರೀತಿ ಟೀಕಿಸುತ್ತಾರೆ.
ಸರ್ಕಾರದ ಹತ್ತಾರು ತರಹದ ರಿಯಾಯ್ತಿ ಯೋಜನೆಗಳು, ಪ್ರೋತ್ಸಾಹಧನ, ಸಹಾಯಧನ ಕಟ್ಟಕಡೆಯ ರೈತನಿಗೆ ಮುಟ್ಟುತ್ತಿಲ್ಲ ಎಂಬ ಕೊರಗು ಮುಂಚಿನಿಂದಲೂ ಇದೆ. ಇದಕ್ಕೆ ಸರ್ಕಾರಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಒಂದು ಕಾರಣವಾದರೆ, ಸರಿಯಾದ ಸಮಯಕ್ಕೆ ರೈತರಿಗೆ ಯೋಜನೆಗಳು ಮುಟ್ಟದಿರುವುದು ಮತ್ತೊಂದು ಕಾರಣ. ಹೊಲ ಹದಗೊಳಿಸಿ, ಮಳೆ ಬಂದಾಗ ರೈತ ಬಿತ್ತಲು ಮುಂದಾಗುತ್ತಾನೆ. ಆ ಸಮಯದಲ್ಲಿ ಬೀಜ ಹಾಗೂ ಗೊಬ್ಬರದ ಕೊರತೆ ಏಳುತ್ತದೆ. ಆಗ ಬೀಜ, ಗೊಬ್ಬರಕ್ಕಾಗಿ ಪರದಾಟ ಸಾಮಾನ್ಯ. ಬಿತ್ತನೆ ಮುಗಿದ ನಂತರ ನೀಡುವ ರಿಯಾಯ್ತಿ ಬೀಜ, ಗೊಬ್ಬರ ಯಾರಿಗೆ ಬೇಕಾದೀತು? ಅಲ್ಲದೇ, ಸರ್ಕಾರಿ ವ್ಯವಸ್ಥೆಯಲ್ಲಿನ ಹೊಂದಾಣಿಕೆಯಿಂದಾಗಿ ರೈತರಿಗೆ ಸಹಾಯಧನ, ರಿಯಾಯ್ತಿಗಳು ಕೆಲವರಿಗೆ ಮಾತ್ರ ಸೀಮಿತ. ಕೇಳಿದರೆ, ಎಲ್ಲ ರೈತರಿಗೂ ರಿಯಾಯ್ತಿ ಅಸಾಧ್ಯ ಎಂಬ ಸಿದ್ಧ ಉತ್ತರ ಕೃಷಿ ಅಧಿಕಾರಿಗಳಲ್ಲಿ ಸಾಮಾನ್ಯ. ಆದ್ದರಿಂದ ಸರ್ಕಾರಿ ಇಲಾಖೆಗಳ ಅಧಿಕಾರಿಗಳಲ್ಲಿ ಪಾರದರ್ಶಕತೆ ಬೇಕಿದೆ. ರಿಯಾಯ್ತಿ ಯೋಜನೆಗಳಲ್ಲಿ ಔಷಧಿ, ಕೃಷಿ ಪರಿಕರಗಳ ಮಾರಾಟದಲ್ಲಿ ಉತ್ಪಾದನಾ ಕಂಪನಿಗಳು ಲಾಭ ಪಡೆಯುತ್ತವೆ ಹೊರತು ರೈತರಲ್ಲ.
ರಿಯಾಯಿತಿ ದರದಲ್ಲಿ ದೊರೆಯದ ಪರಿಕರ: ಕೃಷಿ ಇಲಾಖೆಯಿಂದ ಸಾಕಷ್ಟು ಪರಿಕರಗಳನ್ನು ರಿಯಾಯ್ತಿ ದರದಲ್ಲಿ ಖರೀದಿಸಿದರೂ ಮಾರುಕಟ್ಟೆಯಲ್ಲಿ ಅದೇ ದರದಲ್ಲಿ ದೊರೆಯುತ್ತವೆ. ಉತ್ಪಾದನಾ ಕಂಪನಿಗಳು ಕೃಷಿ ಇಲಾಖೆಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತವೆ ಎಂಬುದು ಇದರಿಂದ ತಿಳಿಯಬಹುದು. ಸಣ್ಣ ಹಾಗೂ ಅತೀ ಸಣ್ಣ ರೈತರಿಗಾಗಿಯೇ ಇರುವ ಸಾಕಷ್ಟು ಯೋಜನೆಗಳು ಸರಿಯಾದ ಮಾಹಿತಿ ಇರದೇ ಅವರನ್ನು ತಲುಪದಿರುವುದು ದುರದುಷ್ಟಕರ.
ಆದ್ದರಿಂದ ಕೃಷಿ ಸಂಪೂರ್ಣ ರೈತರ ಜೀವನ ಆವರಿಸುವಂತೆ ನೂತನ ವ್ಯವಸ್ಥೆ ರೂಪಿತವಾಗಬೇಕಿದೆ. ಎಲ್ಲರಲ್ಲೂ ಪಾರದರ್ಶಕತೆ ಬೆಳೆಯಬೇಕು. ರೈತರೇ ಸ್ವತಃ ತಂತ್ರಜ್ಞಾನ ಬಳಸಿ ಕೃಷಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕೆಲಸವಾಗಬೇಕಿದೆ ಎಂಬುದು ಪ್ರಕಾಶ ಭಟ್ ಅವರ ಆಶಯ.
- ಬಸವರಾಜ ಹಿರೇಮಠ