ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾದ ವಸ್ತು ಪ್ರದರ್ಶನ
ಧಾರವಾಡ: ಉಷ್ಣ ಸಂರಕ್ಷಣ ಸಾಧನ, ಏರ್ ಕೂಲರ್, ದುರಂತ ನಿರ್ವಹಣಾ ತಂತ್ರಗಾರಿಕೆ, ರಾಸಾಯನಿಕ ಬಳಸದೇ ಕೋಳಿ ರೋಗ ನಿಯಂತ್ರಣಕ್ಕೆ ಸಾವಯವ (ನೈಸರ್ಗಿಕ) ಔಷಧ ತಯಾರಿಕೆ, ನೈಸರ್ಗಿಕ ಶೈತ್ಯಾಗಾರ ವ್ಯವಸ್ಥೆ...
ಹೀಗೆ ತರಹೇವಾರಿ ಮಾದರಿ ಉಪಕರಣಗಳನ್ನು ಮಕ್ಕಳೇ ಅಭಿವೃದ್ಧಿಪಡಿಸಿದ್ದು, ಸೋಮವಾರ ಕರ್ನಾಟಕ ವಿವಿ ಆವರಣದಲ್ಲಿರುವ ಬಾಲವಿಕಾಸ ಅಕಾಡೆಮಿ ಸಹಯೋಗದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಪ್ರದರ್ಶನದಲ್ಲಿ ಪ್ರದರ್ಶನಗೊಂಡವು.
ಎರಡು ದಿನದ ಪ್ರದರ್ಶನದಲ್ಲಿ ಬಳ್ಳಾರಿ, ದಾವಣಗೆರೆ, ಗದಗ, ಬಿಜಾಪುರ, ಧಾರವಾಡ, ಕೋಲಾರ, ಹಾಸನ ಸೇರಿದಂತೆ ವಿವಿಧ ಪ್ರೌಢಶಾಲೆಗಳ ತಂಡಗಳು ಭಾಗವಹಿಸಿದ್ದವು.
ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಉದಯ ರಾಯಕರ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಪೋಳ ಮಾತನಾಡಿ, ಈ ವಿಜ್ಞಾನ ಮಾದರಿ ವೀಕ್ಷಣೆಗೆ ಧಾರವಾಡ ಸ್ಥಳೀಯ ಪ್ರೌಢಶಾಲೆ 300 ಮಕ್ಕಳಿಗೆ ಮಂಗಳವಾರ ಮಧ್ಯಾಹ್ನ ವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. ಆಯ್ದ 3 ಪ್ರಾತ್ಯಕ್ಷಿಕೆಗಳಿಗೆ ಕ್ರಮವಾಗಿ ರು. 3 ಸಾವಿರ, ರು. 2, ರು. 1 ಸಾವಿರ ಬಹುಮಾನ, ಸ್ಮರಣಿಕೆಯನ್ನು ಮಂಗಳವಾರ ಬೆಳಗ್ಗೆ 11ಕ್ಕೆ ಜರುಗುವ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಉತ್ತಮ ಪ್ರಾತ್ಯಕ್ಷಿಕೆಗಳ ಆಯ್ಕೆ ಕಾರ್ಯವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ. ಹರೀಶ್ ಭಟ್, ತಜ್ಞರುಗಳಾದ ಪ್ರದೀಪ ಭೂಸನೂರಮಠ, ಡಾ. ಚಿದಾನಂದ ಗವಿಮಠ, ಎಸ್.ಎಸ್. ಬೆಳವಟಗಿ, ಕವಿವಿ ಡಾ. ಡೋರಿಸ್ ನಿರ್ವಹಿಸುವರು ಎಂದರು. ಎಚ್.ಆರ್. ತಿಪ್ಪೇಸ್ವಾಮಿ ಇದ್ದರು.