ಹುಬ್ಬಳ್ಳಿ: 18, 19ರಂದು ಭಗೀರಥ ಜಾಗೃತಿ ಜಾಥಾ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 11
ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯಲಿರುವ ಸುವರ್ಣ ಸೌಧ ಚಲೋ ಹೋರಾಟದ ಅಂಗವಾಗಿ ನ. 18 ಮತ್ತು 19ರಂದು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಭಗೀರಥ ಜಾಗೃತಿ ಜಾಥಾ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಕಳಸಾ-ಬಂಡೂರಿ ನಾಲಾ ಯೋಜನೆಯಿಂದ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ತೀರ್ಮಾನಿಸಿದಂತೆ ಸುವರ್ಣಸೌಧ ಚಲೋ ಕಾರ್ಯಕ್ರಮವನ್ನು ಕಳಸಾ-ಬಂಡೂರಿ ಹೋರಾಟ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ. ಸುವರ್ಣಸೌಧ ಚಲೋ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಯಾಗಿ ಭಗಿರಥ ಜಾಗೃತಿ ಜಾಥಾ ಆಯೋಜಿಸಲಾಗಿದೆ.
ನ. 18, 19ರಂದು ಅವಳಿ ನಗರದ ಮುಖ್ಯ ಸ್ಥಳಗಳಲ್ಲಿ ಹಾಗೂ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಜಾಥಾ ನಡೆಯಲಿದ್ದು, ಇದರೊಂದಿಗೆ ಪ್ರಚಾರಾಂದೋಲನ, ಪ್ರಚಾರ ಸಭೆಗಳು ನಡೆಯಲಿವೆ. ನ. 18ರಂದು ಬೆಳಗ್ಗೆ 10ಕ್ಕೆ ದುರ್ಗದಬೈಲ್‌ನಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. 19ರಂದು ಸಂಜೆ ಧಾರವಾಡದ ಕಲಾಭವನದಲ್ಲಿ ಸಮಾರೋಪ ನಡೆಯಲಿದೆ.
ಪೂರ್ವಸಿದ್ಧತಾ ಸಭೆಯಲ್ಲಿ ಕೇಂದ್ರ ಸಮಿತಿಯ ವಿಜಯ ಕುಲಕರ್ಣಿ, ಸಂಚಾಲಕ ವಿಕಾಸ ಸೊಪ್ಪಿನ, ಅಧ್ಯಕ್ಷ ವಿಶ್ವನಾಥ ಗಿಳಿಮಾವ, ಮಹೇಶ ಪತ್ತಾರ, ಅಮೃತ ಇಜಾರಿ, ಎಂ.ಬಿ. ಕಟ್ಟಿ, ಹನಮಂತಸಾ ನಿರಂಜನ, ವಿಠ್ಠಲ ಕಮ್ಮಾರ, ಹನಮಂತಪ್ಪ ಮೇಟಿ, ಕೆ.ಎಚ್. ಪಾಟೀಲ, ಈಶ್ವರ ಪಟ್ಟಣಶೆಟ್ಟಿ ಮುಂತಾದವರು ಇದ್ದರು.