ಅತ್ಯುತ್ತಮ ಸ್ವಯಂ ಸೇವಕ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಬಾಬಾಗೌಡ ಗೀದ್ರಿಗೌಡ್ರ ಇವರಿಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯುತ್ತಮ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗೆ ವಿಶ್ವವಿದ್ಯಾಲಯ ಅಭಿನಂದನೆ ಸಲ್ಲಿಸಿದೆ.
ಉದ್ಯೋಗ ಪಡೆದ 40 ವಿದ್ಯಾರ್ಥಿಗಳು
ಧಾರವಾಡ: ಇಲ್ಲಿನ ವಿದ್ಯಾಪೋಷಕ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಪದವೀಧರರ ಫಿನಿಷಿಂಗ್ ಸ್ಕೂಲ್‌ನ ಮೂರು ತಿಂಗಳು ತರಬೇತಿ ಪಡೆದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಜೆ.ಪಿ. ಮೋರ್ಗನ, ಫಡಿಲಿಟಿ, ಐಬಿಎಂ ಹಾಗೂ ಎಂಫ್ಯಾಸಿಸ್ ನಂತಹ ಕಂಪನಿಗಳಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿವೆ. ಈಗಾಗಲೇ ಸಂಸ್ಥೆಯ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದು, ಶೇ. 100 ರಷ್ಟು ಉದ್ಯೋಗ ಒದಗಿಸಿಕೊಡಲಾಗಿದೆ ಎಂದು ಸಂಸ್ಥೆ ನಿರ್ದೇಶಕ ಜಿ. ಆನಂದರಾವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗದಲ್ಲಿ ಯಶಸ್ವಿಯಾಗಿ
ಧಾರವಾಡ: ಇಂದಿನ ಯುವಕರಿಗೆ ಸೃಜನಶೀಲತೆ, ಬಹುಮುಖ ಕೌಶಲ್ಯತೆ, ಶಿಸ್ತು, ಕಷ್ಟ ಸಹಿಷ್ಣುತೆ ಗುಣಗಳನ್ನು ಬೆಳೆಸಿಕೊಂಡು ಸ್ವ-ಉದ್ಯೋಗದಲ್ಲಿ ಯಶಸ್ವಿಯಾಗಬೇಕೆಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕರಾದ ಎಸ್.ಆರ್. ಗಂಗಾ ಹೇಳಿದರು. ಇಲ್ಲಿನ ರುಡ್ ಸೆಟ್ ಸಂಸ್ಥೆಯು ಸ್ವ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗಾಗಿ ಏರ್ಪಡಿಸಲಾದ ಕಂಪ್ಯೂಟರ್ ಡಿಟಿಪಿ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿಯೂ ಸಾಮರ್ಥ್ಯ, ಪ್ರತಿಭೆ ಇರುತ್ತದೆ. ಅದನ್ನು ಉಪಯೋಗಿಸಿ ಸತತ ಪ್ರಯತ್ನ, ಆಸಕ್ತಿಯಿಂದ ಉದ್ಯೋಗ ಮಾಡಿ ಯಶಸ್ವಿ ಹೊಂದಿ ಎಂದು ಹೇಳಿದರು. ಸಂಸ್ಥೆಯು ಸ್ವ-ಉದ್ಯೋಗ ತರಬೇತಿಗಳನ್ನು ನೀಡಿ ಸ್ವಾವಲಂಬಿಗಳನ್ನಾಗಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ ಎಂದರು. ಸಂಸ್ಥೆಯ ನಿರ್ದೇಶಕ ಎಂ.ಡಿ. ವೀರಾಪುರ, ಸಂಸ್ಥೆಯ ಉಪನ್ಯಾಸಕ ಪ್ರದೀಪ ಮೇಲ್ಗಡೆ, ಉಪನ್ಯಾಸಕ ಜಗದೀಶ ಪೂಜಾರ ಇದ್ದರು.
17ರಂದು ಪ್ರಶಸ್ತಿ ಪ್ರದಾನ
ಹುಬ್ಬಳ್ಳಿ: ಡಾ. ಡಿ.ಎಸ್. ಕರ್ಕಿ ಅವರ ಜನ್ಮದಿನ ಅಂಗವಾಗಿ ನ. 17ರಂದು ಸಂಜೆ 5:30ಕ್ಕೆ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್‌ನಲ್ಲಿ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಸಾಹಿತಿ ಮನು ಬಳಿಗಾರ ಆಗಮಿಸುವರು. ಡಾ. ಪ್ರಹ್ಲಾದ ಅಗಸನಕಟ್ಟೆ ಕಾವ್ಯಕೃತಿ ಪರಿಚಯಿಸುವರು. ಕವಿವಿ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥ ಡಾ. ಎಸ್.ಎಂ. ವೃಷಭೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಸತೀಶ ಕುಲಕರ್ಣಿ ಅವರಿಗೆ ಡಾ. ಡಿ.ಎಸ್. ಕರ್ಕಿ ಕಾವ್ಯಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
ನವಲಗುಂದ: ಇಲ್ಲಿಯ ಗುಡ್ಡದಕೇರಿ ಓಣಿಯಲ್ಲಿ ಮಂಗಳವಾರ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು. ಸಾನ್ನಿಧ್ಯ ವಹಿಸಿದ್ದ ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ ಮಾತನಾಡಿ, ಧರ್ಮ ಮತ್ತು ದೇವರನ್ನು ಹೊರತು ಪಡಿಸಿದರೆ ಭಾರತ ದೇಶ ಕಲ್ಪನೆಗೂ ಕೂಡ ನಿಲುಕದ್ದು. ಪುರಾತನ ಕಾಲದಿಂದಲೂ ಎಲ್ಲರೂ ದೇವರ ಬಗ್ಗೆ ನಂಬಿಕೆ, ಶ್ರದ್ಧೆ ಭಕ್ತಿಯಿಂದ ನಡೆದುಕೊಂಡು ಬಂದಿದ್ದೇವೆ ಎಂದರು. ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನು ಸ್ವಾಮೀಜಿ, ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಜಮಖಂಡಿಯ ಗೌರಿಶಂಕರ ಸ್ವಾಮೀಜಿ, ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಇದಕ್ಕೂ ಮುನ್ನ ಶೆಟ್ಟಕ್ ಕೇರಿಯಿಂದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯರ ಪುರಪ್ರವೇಶ ಪ್ರಾರಂಭಗೊಂಡಿತು. ಸುಮಂಗಲೆಯರ ಕುಂಭ ಮೆರವಣಿಗೆ, ಡೊಳ್ಳು, ಕರಡಿ ಮಜಲಿನಿಂದ ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ತಾಪಂ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಡಾ. ಬಸವರಾಜ ಕಮಕೇರಿ, ನಿಂಗಪ್ಪ ಹಂಚಿನಾಳ, ಜೀವನ ಪವಾರ, ಅಶೋಕ ಮಜ್ಜಿಗುಡ್ಡ, ರಾಯನಗೌಡ ಪಾಟೀಲ, ನಿಂಗಪ್ಪ ಸುಳ್ಳದ, ಹುಚ್ಚಪ್ಪ ಭೋವಿ, ಈರಣ್ಣ ಚವಡಿ, ಶ್ರೀಕಾಂತ ಪಾಟೀಲ ಇದ್ದರು. ನಾಗಲಿಂಗೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಣ್ಣಪ್ಪ ಬಾಗಿ ಸ್ವಾಗತಿಸಿದರು. ಎ.ಬಿ. ಕೊಪ್ಪದ ನಿರೂಪಿಸಿದರು. ಎಸ್.ಎಂ.ಪಟ್ಟಣಶೆಟ್ಟಿ ವಂದಿಸಿದರು.