ಇಂದಿನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರವಾಸ
ಧಾರವಾಡ: ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನ. 14ರಿಂದ ಉತ್ತರ ಕರ್ನಾಟಕದ ಪ್ರವಾಸ ಕೈಗೊಳ್ಳಲಿದ್ದಾರೆ. ನ. 14ರಂದು ಬೆಳಗ್ಗೆ ರೈಲಿನ ಮೂಲಕ ಹುಬ್ಬಳ್ಳಿಗೆ ಆಗಮಿಸಿ 10ಕ್ಕೆ ಸರ್ಕ್ಯೂಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ. ನಂತರ ಬಿಟಿ ಹತ್ತಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಳಸಾ-ಬಂಡೂರಿ ನಾಲಾ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಖಾನಾಪುರ ಐಬಿಯಲ್ಲಿ ರೈತರೊಡನೆ ಸಂವಾದ ನಡೆಸಲಿದ್ದಾರೆ. 14ರಂದು ಬೆಳಗಾವಿಯಲ್ಲಿ ವಾಸ್ತವ್ಯ ಮಾಡುತ್ತಾರೆ. 15ರಂದು ಜಿಲ್ಲೆಯ ಕಬ್ಬು ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿ ಕಬ್ಬು ಬೆಳೆಗಾರರೊಂದಿಗೆ ಚರ್ಚಿಸಲಿದ್ದಾರೆ. ಧಾರವಾಡದಲ್ಲಿ ಮಧ್ಯಾಹ್ನ ಮಾಜಿ ಶಾಸಕ ಎ.ಬಿ. ದೇಸಾಯಿ ಅವರ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಅಲ್ಲಿಂದ ಎತ್ತಿನಗುಡ್ಡದಲ್ಲಿರುವ ವಾಲ್ಮೀಕಿ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಸಂಜೆ 4ಕ್ಕೆ ನವಲಗುಂದದಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ಖೋಖೋ ಪಂದ್ಯಾವಳಿ ಉದ್ಘಾಟಿಸುತ್ತಾರೆ. ಬದಾಮಿಗೆ ತೆರಳಿ ವಾಸ್ತವ್ಯ ಮಾಡುತ್ತಾರೆ. 16ರಂದು ಬಾಗಲಕೋಟೆ ಜಿಲ್ಲೆಯ ಪ್ರವಾಸ ಕೈಗೊಂಡು ಕಬ್ಬು, ದಾಳಿಂಬೆ, ದ್ರಾಕ್ಷಿ ಬೆಳೆಗಾರರೊಂದಿಗೆ ಚರ್ಚಿಸಿ ನಂತರ ಕುಷ್ಟಗಿ, ಗಂಗಾವತಿ ಕೊಪ್ಪಳದಲ್ಲಿ ಸಂಚರಿಸಿ ಸಿಂಧನೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ.