ಎಲ್ಲರಿಗೂ ಶಾದಿಭಾಗ್ಯ ವಿಸ್ತರಿಸಿ: ಆಗ್ರಹ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 13
ಎಲ್ಲ ಜಾತಿ, ಧರ್ಮ, ಸಮುದಾಯದಲ್ಲಿ ಬಡ ಹೆಣ್ಣುಮಕ್ಕಳಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳಿಗೂ ಶಾದಿಭಾಗ್ಯ ಯೋಜನೆ ವಿಸ್ತರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ವತಿಯಿಂದ ಆಗ್ರಹಿಸಲಾಗಿದೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಮತ ರಾಜಕೀಯ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ಜನಾಂಗದ ಹೆಣ್ಣು ಮಕ್ಕಳಿಗೆ ಮಾತ್ರ ಶಾದಿಭಾಗ್ಯ ಯೋಜನೆಯಡಿ ರು. 50 ಸಾವಿರ ನೀಡಲು ಮುಂದಾಗಿರುವುದು ಖಂಡನೀಯ. ಈ ಮೂಲಕ ತಮ್ಮ ಸ್ವಾರ್ಥ, ಮತಬ್ಯಾಂಕ್ ರಾಜಕಾರಣ ಕೈಗೊಂಡಿದ್ದು ಸರಿಯಲ್ಲ ಎಂದು ಹೇಳಿದರು.
ಸಭಾದ ಗೌರವಾಧ್ಯಕ್ಷ ಪ್ರಣಾವಾನಂದ ಸ್ವಾಮೀಜಿ ಮಾತನಾಡಿ, ಈ ಯೋಜನೆಯಿಂದ ಇಡೀ ಸಮಾಜದಲ್ಲಿ, ರಾಜ್ಯದಲ್ಲಿ ಶಾಂತಿ ಕದಡುವುದು ನಿಶ್ಚಿತ. ಹಾಗೇನಾದರೂ ಅನಾಹುತಗಳಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ. ಸರ್ಕಾರದ ಈ ನಡೆಗೆ ಪರ್ಯಾಯವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಐದು ಸಾವಿರ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರ ಮಾಡಿಸುತ್ತೇನೆಂದು ಪ್ರತಿಪಾದಿಸಿದರು. ಅಲ್ಲದೇ, ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಒಪ್ಪಿಸಿ ಮದುವೆಯಾಗಲು ಮುಂದಾದರೆ ಅವರಿಗೆ ಮನೆ ಸೌಕರ್ಯ, ಕೆಲಸ ನೀಡಿ ಆ ಜೋಡಿಯ ಸಂರಕ್ಷಣೆಯ ಹೊಣೆ ಮಹಾಸಭಾ ನೋಡಿಕೊಳ್ಳಲಿದೆ. ಯಾವುದೇ ಕಾರಣಕ್ಕೂ ಹೆದರುವ ಆತಂಕ ಬೇಡ ಎಂದರು.
ಮೌಢ್ಯ ತಡೆ ಕರಡು ಮಸೂದೆಯ ಮೂಲಕ ಹಿಂದೂಗಳ ಭಾವನೆ, ಆಚರಣೆಗಳ ಮೇಲೆ ಗದಾ ಪ್ರಹಾರ ನಡೆಸಲು ಸರ್ಕಾರ ಮುಂದಾಗಿದ್ದು, ಇದು ಖಂಡನೀಯ. ಈ ಕಾಯ್ದೆ ಮೂಲಕ ಸರ್ಕಾರ ಜನರ ಆಚಾರ-ವಿಚಾರಗಳ ಮೇಲೆ ಕಡಿವಾಣ ಹಾಕುವುದು ಸರಿಯಲ್ಲ. ಇದನ್ನು ಈ ಕೂಡಲೇ ಕೈ ಬಿಡಬೇಕು. ಇಲ್ಲವಾದರೇ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು. ಸಂಘಟನೆಯ ವಿವೇಕಾನಂದ ಪಾಲನಕರ್, ಜಯಶ್ರೀ ರೇವಣಕ ಇದ್ದರು.