ಕಬ್ಬಿಗೆ ದಕ್ಷಿಣಕ್ಕೊಂದು ಉತ್ತರಕ್ಕೊಂದು ದರ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 14
ಕಬ್ಬಿನ ದರ ನಿಗದಿ ಮಾಡುವಾಗ ರಾಜ್ಯ ಸರ್ಕಾರ ದಕ್ಷಿಣ ಕರ್ನಾಟಕಕ್ಕೊಂದು ಹಾಗೂ ಉತ್ತರ ಕರ್ನಾಟಕಕ್ಕೊಂದು ದರ ಘೋಷಿಸಿ ರೈತರನ್ನು ಒಡೆದು ಆಳುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಉಪಾಧ್ಯಕ್ಷ ಶಿವಾನಂದ ಗುರುಮಠ ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಡೀ ರಾಜ್ಯದಲ್ಲಿ ಇಳುವರಿ ಆಧಾರಿತ ಏಕರೂಪ ದರ ನಿಗದಿಪಡಿಸಲು ಸರ್ಕಾರ ವಿಫಲವಾಗಿದೆ. ಕಬ್ಬು ಬೆಳೆಗಾರರ ಹೋರಾಟದ ತೀವ್ರತೆ ಹಾಗೂ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಟಾಚಾರಕ್ಕೆ ಸಮಿತಿ ರಚಿಸಿ ಟನ್ ಕಬ್ಬಿಗೆ ಉತ್ತರ ಕರ್ನಾಟಕದಲ್ಲಿ ರು. 2,500 (ಕಟಾವು ಕಂಪನಿ ಖರ್ಚು) ಹಾಗೂ ದಕ್ಷಿಣದಲ್ಲಿ ರು. 2,400 (ಕಟಾವು ರೈತರೇ ಮಾಡಬೇಕು) ಎಂಬ ಅವೈಜ್ಞಾನಿಕ ಕಬ್ಬಿನ ದರ ನಿಗದಿಪಡಿಸಿದೆ. ರಾಜ್ಯ ಸಲಹಾ ಬೆಲೆ ಜಾರಿ ಹಾಗೂ ಸಕ್ಕರೆ ಇಳುವರಿ ಆಧಾರದ ಮೇಲೆ ಕಬ್ಬಿಗೆ ಏಕರೂಪ ದರ ನಿಗದಿ ಹಾಗೂ ಉಪ ಉತ್ಪನ್ನಗಳ ಆದಾಯಗಳನ್ನು ಪರಿಗಣಿಸಿ ಕಬ್ಬಿಗೆ ಅಂತಿಮ ದರ ನಿಗದಿಪಡಿಸಲು ಒತ್ತಾಯಿಸುತ್ತಿದ್ದು, ಸರ್ಕಾರ ಮಾತ್ರ ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವೂ ಇಳುವರಿ ಆಧಾರಿತ ಏಕ ರೂಪವಾಗಿ ಟನ್ ಕಬ್ಬಿಗೆ ರು. 3000 ನಿಗದಿಪಡಿಸಬೇಕು. ಕೂಡಲೇ ಪರಿಷ್ಕೃತ ದರವನ್ನು ನಿಗದಿಪಡಿಸಿ, ರೈತರು ಬೆಳೆದ ಅವಧಿ ಮೀರಿದ ಕಬ್ಬನ್ನು ಆದಷ್ಟು ಬೇಗ ಕಾರ್ಖಾನೆಗಳಿಗೆ ಕಟಾವು ಮಾಡಿ ಸಾಗಿಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಅಧಿವೇಶನದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಾನಂದ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಗುಂಡಪ್ಪ ಕಮತೆ, ರಾಜ್ಯ ಸಂಚಾಲಕ ಹುಲಮನಿ ಠಾಕೂರ, ಪಕ್ಷಾತೀತ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎಂ. ಹಣಸಿ ಮುಂತಾದವರು ಉಪಸ್ಥಿತರಿದ್ದರು.