ಜಾತಿ ಆಧರಿಸಿ ಮಕ್ಕಳ ಪ್ರವಾಸ ಬೇಡ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 14
ಪ್ರಾಥಮಿಕ ಶಾಲೆಯ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯ ಕಾಂಗ್ರೆಸ್ ಸರ್ಕಾರ ಹಮ್ಮಿಕೊಂಡಿರುವ 'ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ' ಯೋಜನೆಯಿಂದ ಇತರ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಯೋಜನೆಯನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಜಾತಿ ಆಧಾರದ ಮೇಲೆ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಯಿಂದ ಸರ್ಕಾರ ಬೌದ್ಧಿಕ ದಿವಾಳಿತನದ ಪರಾಕಾಷ್ಠೆ ತಲುಪಿದಂತೆ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಯೋಜನೆಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ ರು. 3,500 ವೆಚ್ಚ ಮಾಡಲಾಗುತ್ತಿದೆ. 4 ದಿನಗಳ ಈ ಪ್ರವಾಸಕ್ಕಾಗಿ ಸರ್ಕಾರ ಒಟ್ಟು ರು. 3.15 ಕೋಟಿ ಬಿಡುಗಡೆ ಮಾಡಿದೆ.
ಈ ಹಿಂದೆಯೂ ಶಾದಿಭಾಗ್ಯ ಯೋಜನೆಯಿಂದ ಇತರ ಸಮುದಾಯಗಳೂ ಸೇರಿದಂತೆ ಅಲ್ಪಸಂಖ್ಯಾತರಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಕ್ಕೊಳಗಾಗಿದ್ದರು. ಇದೀಗ ಶೈಕ್ಷಣಿಕ ಪ್ರವಾಸ ಯೋಜನೆ ಮೂಲಕ ಮಕ್ಕಳಲ್ಲಿ ಜಾತಿ ಆಧಾರದ ಮೇಲೆ ಭಿನ್ನಾಭಿಪ್ರಾಯವನ್ನುಂಟು ಮಾಡಲು ಹೊರಟಿರುವುದು ಖಂಡನೀಯ ಎಂದರು.
ಈ ಯೋಜನೆಯನ್ನು ತಕ್ಷಣ ಮರುಪರಿಶೀಲಿಸಿ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅನ್ವಯಿಸುವಂತೆ ಆದೇಶಿಸಬೇಕು. ಇಲ್ಲದಿದ್ದರೆ ನ. 17ರ ನಂತರ ತೀವ್ರ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಪ್ರಮುಖ ರಸ್ತೆಗಳೂ ಸೇರಿದಂತೆ ನಗರಗಳಲ್ಲಿನ ಒಳ ರಸ್ತೆಗಳು ತಗ್ಗು ಬಿದ್ದಿವೆ. ರಸ್ತೆಗಳ ತಗ್ಗು ಮುಚ್ಚಲೂ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಸೌಲಭ್ಯ ನೀಡುತ್ತಿಲ್ಲ. ಸರ್ಕಾರ ಆರ್ಥಿಕ ದಿವಾಳಿಗೆದ್ದಿದ್ದು, ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಇಂಥ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸುತ್ತಿರಬಹುದು ಅಥವಾ ಸಮಾಜ ಒಡೆಯುವ ಮೂಲಕ ಮತಬ್ಯಾಂಕ್ ಸೃಷ್ಟಿಗೆ ಮುಂದಾಗಿರುವ ಸಾಧ್ಯತೆ ಇದೆ ಎಂದು ದೂರಿದರು.