ರಾಜಿನಾಮೆ ಪರಿಹಾರವಲ್ಲ: ಸಚಿವ ಲಾಡ್
ಕಲಘಟಗಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅಪೂರ್ಣ ದಾಖಲೆ, ಅಲ್ಪ ಮಾಹಿತಿಯೊಂದಿಗೆ ವಿರೋಧ ಪಕ್ಷದವರು, ಸಮಾಜ ಪರಿವರ್ತನಾ ಸಮುದಾಯ ನನ್ನ ವಿರುದ್ಧ ಅಗ್ಗದ ಪ್ರಚಾರ ಮಾಡಲು ಮುಂದಾಗಿರುವುದು ಯಾವ ಉದ್ದೇಶಕ್ಕಾಗಿ ಎಂದು ತಿಳಿಯದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳ ದಿನಾಚರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆಗಳಿಗೆ, ನ್ಯಾಯಾಲಯಕ್ಕೆ ಪೂರ್ಣ ದಾಖಲೆ ನೀಡಿದ್ದೇನೆ. ಇಲ್ಲಿ ವರೆಗೂ ನಾವು ಅಕ್ರಮ ಗಣಿಗಾರಿಕೆ ಮಾಡಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿಲ್ಲ. ನಮ್ಮ ವಿರುದ್ಧ ಆರೋಪ ಮಾಡುವವರು ನ್ಯಾಯಾಲಯಕ್ಕೆ ಮಾಹಿತಿ ನೀಡುವುದನ್ನು ಬಿಟ್ಟು ಮಾಧ್ಯಮಗಳ ಮೂಲಕ ಅಪಪ್ರಚಾರದಲ್ಲಿ ಕಾಲಹರಣ ಮಾಡಿ ನನ್ನ ಹಾಗೂ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಅಡಿಯುಂಟು ಮಾಡುತ್ತಿರುವುದು ಯಾಕೆ? ನನ್ನ ರಾಜಿನಾಮೆಯೇ ಇದಕ್ಕೆ ಪರಿಹಾರವೇ?ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎ,ಬಿ,ಸಿ, ಕೆಟಗೇರಿ ಎಂದರೇನು ಎಂದು ಅರಿಯದೇ ಗೊಂದಲ ಉಂಟು ಮಾಡುತ್ತಿರುವುದು ಯಾವ ನ್ಯಾಯ ಎಂದರು.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಬೆಳಗಾವಿ ಅಧಿವೇಶನಕ್ಕೆ ಅಡ್ಡಿಪಡಿಸಲು ಹೊರಟಿರುವುದನ್ನು ಖಂಡಿಸಿದ ಅವರು, ಅಕ್ರಮ ಗಣಿಗಾರಿಕೆ ಬಗೆಗೆ ಪೂರ್ಣ ಮಾಹಿತಿ ಕಲೆ ಹಾಕಿ ನ್ಯಾಯಾಲಯಕ್ಕೆ ಹೋಗಲಿ. ಅದನ್ನು ಬಿಟ್ಟು ಅಧಿವೇಶನದ ಕಾಲಹರಣ ಮಾಡುವದು ಬೇಡ ಎಂದರು.
ಮಾಧ್ಯಮಗಳಿಗೂ ಸಂಪೂರ್ಣ ದಾಖಲೆಗಳನ್ನು ನೀಡಲಾಗಿದ್ದರೂ ಪೂರ್ಣ ಸುದ್ದಿಯನ್ನು ಬಿಟ್ಟು ದೂರುದಾರ ಎಸ್.ಆರ್. ಹಿರೇಮಠ ಸುದ್ದಿಯನ್ನೇ ಬಿಂಬಿಸುತ್ತಿದ್ದಾರೆ ಎಂದರು.