20ರಂದು ಕನಕದಾಸರ ಜಯಂತ್ಯುತ್ಸವ
ಧಾರವಾಡ: ಕನಕದಾಸರ 526ನೇ ಜಯಂತ್ಯುತ್ಸವವನ್ನು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನ. 20ರಂದು ಬೆಳಗ್ಗೆ 9ಕ್ಕೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಜಯಂತ್ಯುತ್ಸವದ ರೂಪುರೇಷೆಗಳನ್ನು ಅಂತಿಮಗೊಳಿಸಲಾಯಿತು. ಬೆಳಗ್ಗೆ 9ಕ್ಕೆ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಕನಕದಾಸರ ಭಾವಚಿತ್ರದ ಪೂಜೆ ಜತೆ ಜನಪ್ರತಿನಿಧಿಗಳ ಸಮ್ಮುಖ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕನಕದಾಸರ ಕುರಿತು ಹಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಮುದೇನೂರ ನಿಂಗಪ್ಪ ವಿಶೇಷ ಉಪನ್ಯಾಸ ನೀಡುವರು. ಬೆಳಗ್ಗೆ 10.30ಕ್ಕೆ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಿ ಕಲಾಭವನದ ಎದುರು ಮುಕ್ತಾಯಗೊಳಿಸುವುದು ಎಂದು ತೀರ್ಮಾನಿಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಸಮೀರ್ ಶುಕ್ಲ ಮಾತನಾಡಿ, ಜಿಲ್ಲಾ ಮಟ್ಟಕ್ಕೆ ರು. 50 ಸಾವಿರ ಹಾಗೂ ತಾಲೂಕು ಕೇಂದ್ರಗಳಿಗೆ ತಲಾ ರು. 25 ಸಾವಿರ ಅನುದಾನ ನೀಡಿದ್ದು, ತಾಲೂಕು ಕೇಂದ್ರಗಳಲ್ಲಿ ಕನಕ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ಭಾಗವಹಿಸಿದ ಸಮಾಜದ ಗಣ್ಯರು, ಧಾರವಾಡದಲ್ಲಿ ಪ್ರಮುಖ ವೃತ್ತವೊಂದರಲ್ಲಿ ಕನಕದಾಸರ ಪೂರ್ಣ ಪ್ರಮಾಣದ ಕಂಚಿನ ಪುತ್ಥಳಿ ಸ್ಥಾಪಿಸಬೇಕು, ಜಯಂತ್ಯುತ್ಸವ ಆಚರಣೆಗೆ ಜಿಲ್ಲೆ ಹಾಗೂ ತಾಲೂಕು ಮಟ್ಟಗಳಿಗೆ ಸದ್ಯ ನೀಡುತ್ತಿರುವ ಅನುದಾನ ಪ್ರಮಾಣವನ್ನು ದ್ವಿಗುಣಗೊಳಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ, ಜಿಪಂ ಮಾಜಿ ಅಧ್ಯಕ್ಷ ಸಿ.ಎನ್. ಶ್ಯಾಗೋಟಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷೆ ಯಲ್ಲಮ್ಮ ನಾಯ್ಕರ ಮತ್ತಿತರರು ಉಪಸ್ಥಿತರಿದ್ದರು.