ಕಳಸಾ ಯೋಜನೆ: ಸರ್ಕಾರ ನಿಲುವು ಸ್ಪಷ್ಟಪಡಿಸಲಿ
ಹುಬ್ಬಳ್ಳಿ: ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉದ್ದೇಶಿತ ಯೋಜನೆಯಿಂದ ಲಭ್ಯವಾಗುವ ನೀರನ್ನು ಕುಡಿಯಲು ಬಳಸಿಕೊಳ್ಳಲಾಗುತ್ತಿದೆಯೇ ಅಥವಾ ನೀರಾವರಿ ಚಟುವಟಿಕೆಗೆ ಉಪಯೋಗಿಸಲಾಗುವುದು ಎನ್ನುವ ಸಂಗತಿಯನ್ನು ನ್ಯಾಯಾಧೀಕರಣದ ಎದುರು ಸ್ಪಷ್ಟಪಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆ ಅನುಷ್ಠಾನದ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ಸರ್ಕಾರದ ನಿಲುವಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಸುವರ್ಣ ಚಲೋ ಸೌಧ ಮುತ್ತಿಗೆಗೆ ಸಮಿತಿ ಬದ್ಧವಾಗಿದೆ. ಕಳಸಾ ಬಂಡೂರಿ ಯೋಜನೆ ಜಾರಿಗೆ ತಗಾದೆ ತೆಗೆದಿರುವ ಗೋವಾ ರಾಜ್ಯ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿಯವರೆಗೆ ನ್ಯಾಯಾಧೀಕರಣದಲ್ಲಿ ತನ್ನ ನಿಲುವು ಏನು ಎಂದು ಸ್ಪಷ್ಟಪಡಿಸಿಲ್ಲ. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಯೋಜನೆ ಕುರಿತು ಜರುಗಿದ ಸಭೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಸ್ಪಷ್ಟ ಉತ್ತರ ನೀಡಲು ಅವರಿಂದ ಆಗಿಲ್ಲ ಎಂದು ದೂರಿದರು. ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವಿದೆ. ಹೀಗಾಗಿ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.
ಕಳಸಾ ಹೋರಾಟದ ಕುರಿತು ಜನ ಜಾಗೃತಿ ಮೂಡಿಸಲು ನ. 18 ಮತ್ತು 19ರಂದು ಅವಳಿ ನಗರದಲ್ಲಿ ಭಗೀರಥ ಜಾಗೃತಿ ಜಾಥಾ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಕಾಸ ಸೊಪ್ಪಿನ, ವಿ.ಜಿ. ಕಮ್ಮಾರ, ಶೋಭಾ ಚಲವಾದಿ, ರಾಜಣ್ಣ ಕೊರವಿ, ಹನುಮಂತಸಾ ನಿರಂಜನ ಇದ್ದರು.