ಜಿಪಂ, ತಾಪಂಗೆ ಅನುದಾನ ಬಿಡುಗಡೆಗೆ ಯತ್ನ: ಲಾಡ್
ಧಾರವಾಡ: ಗ್ರಾಪಂಗಳಿಗೆ ಸರ್ಕಾರದಿಂದ ನೇರವಾಗಿ ಅನುದಾನ ಬಿಡುಗಡೆಯಾಗುತ್ತಿದ್ದು, ಜಿಪಂ ಮತ್ತು ತಾಪಂಗೆ ಹೆಚ್ಚಿನ ಅನುದಾನ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುವುದೆಂದು ಸಚಿವ ಸಂತೋಷ ಲಾಡ್ ಹೇಳಿದರು.
ಕಲಘಟಗಿ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಶುಕ್ರವಾರ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಗ್ರಾಪಂ ಕಟ್ಟಡ ಉದ್ಘಾಟಿಸಿದ ಅವರು, ಜಿಲ್ಲೆಯಲ್ಲಿ ಅನ್ನಭಾಗ್ಯ ಕೋರಿ 1 ಲಕ್ಷ ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಗುವುದು ಎಂದರು.
ಕಬ್ಬು ಕಟಾವಿಗೆ ಬಂದಿದ್ದು, ಫ್ಯಾಕ್ಟರಿಗಳು ಕಬ್ಬು ನೂರಿಸಲು ಪ್ರಕ್ರಿಯೆ ಪ್ರಾರಂಭಿಸಲು ಸಿದ್ಧತೆಗಳು ನಡೆದಿರುವುದರಿಂದ ಇಷ್ಟರಲ್ಲೇ ರೈತರ ಸಂಕಷ್ಟ ಪರಿಹಾರವಾಗಲಿದೆ ಎಂದರು.
ಪರಪ್ಪ ನಂದನವಾಡಿ, ಜಿಪಂ ಸದಸ್ಯರಾದ ಉಮಾದೇವಿ ಗುಡದೇರಿ, ತಾಪಂ ಸದಸ್ಯ ಕೃಷ್ಣ ಕೋಳನಟ್ಟಿ, ಎಪಿಎಂಸಿ ಅಧ್ಯಕ್ಷ ತೆಲಗಾರ, ಗ್ರಾಪಂ ಉಪಾಧ್ಯಕ್ಷ ಸುಶೀಲಾ ಹರಿಜನ ಇದ್ದರು.